ಕ
ಳೆದ 25 ವರ್ಷಗಳಿಂದ ರಿಕ್ಷಾ ಓಡಿಸಿ ಶ್ರಮದ ದುಡಿಮೆ ಮೈಗೂಡಿಸಿಕೊಂಡಿದ್ದರೂ ಕಲೆಯ ಬದುಕಿನಿಂದ ಆಕರ್ಷಿತರಾಗಿ ಬೆಳ್ಳಿ ತೆರೆ, ಕಿರುತೆರೆಯಲ್ಲಿ ಪೋಷಕ ನಟನಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿ ಜನಮನ ಸೂರೆಗೊಂಡ ಕರಾವಳಿಯ ಅಪರೂಪದ ಕಲಾವಿದ ಸತೀಶ್ ಕಲ್ಯಾಣಪುರ.
ಬಡತನದ ಬದುಕಿನ ಜಂಜಾಟದ ನಡುವೆ ಹವ್ಯಾಸಿ ನೆಲೆಯಲ್ಲಿ ಬಣ್ಣದ ಬದುಕಿಗೆ ಹೊರಳಿದ ಇವರು ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಪೋಷಕ, ಹಾಸ್ಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಪ್ರತಿಭಾನ್ವಿತ, ಪರಿಪೂರ್ಣ ಕಲಾವಿದ. ತನ್ನದೆ ಚಿತ್ರ ಕಲಾ ಸಂಸ್ಥೆ (ಪರಮೇಶ್ವರೀ ಕ್ರಿಯೇಷನ್ಸ್ ನಯಂಪಳ್ಳಿ) ಸ್ಥಾಪಿಸಿ, ಕಿರುಚಿತ್ರ ನಿರ್ಮಿಸಿ ನಿರ್ದೇಶಿಸುತ್ತಿರುವ ಇವರು ಅಪ್ಪಟ ರಂಗಭೂಮಿ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದಾರೆ.
ತನ್ನ ಸರಳ, ಸೌಮ್ಯ ಸ್ವಭಾವದಿಂದ ಎಲ್ಲರಲ್ಲೂ ಸ್ನೇಹಪರತೆ ಹೊಂದಿರುವ ಈ ಕಲಾವಿದ ಬ್ಯೂಟಿಷಿಯನ್ ವೃತ್ತಿ ನಡೆಸುವ ಪತ್ನಿ , ಮಗಳೊಂದಿಗೆ ಸುಖೀ ಸಂಸಾರ ಹೊಂದಿದ್ದಾರೆ.
ಕಾಸರಗೋಡು ಚಿನ್ನಾ ನಿರ್ದೇಶನದ ಕೊಂಕಣಿ ಚಿತ್ರ ಉಜ್ವಾಡು, ಎಂ.ಡಿ ಕೌಶಿಕ್ ನಿರ್ದೇಶನದ ಬ್ಯಾರಿ ಚಿತ್ರ ಬೈರಾಕೋಲ್, ಕನ್ನಡ ಚಿತ್ರಗಳಾದ ನೀನೇನಾ ಭಗವಂತ,ಕಿಲಾಡಿ ಕಿಟ್ಟಿ, ರಾಧನ ಗಂಡ, ಕಾರ್ಕಳದ ಪವಾಡಪುರುಷ ಸಂತ ಲಾರೆನ್ಸ್, ಮಹಾನದಿ, ಗೌತಮಿ ನಿವಾಸ, 400, ಈ ಮಣ್ಣು, ತುಳು ಚಲನಚಿತ್ರಗಳಾದ ಕಂಚಿಲ್ದ ಬಾಲೆ, ಬಂಗಾರ್ದ ಕುರಲ್, ಆಟಿಡೊಂಜಿ ದಿನ, ಮೈ ನೇಮ್ ಈಸ್ ಅಣ್ಣಪ್ಪ, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ, ದೇಯಿ ಬೈದೆತಿ, ಎರೆಗಾವ್ ಕಿರಿಕಿರಿ, ಕಾರ್ನಿಕದ ಕಲ್ಲುರ್ಟಿ, ಪುಂಡಿ ಪಣವು ಇವರ ನಟನೆಯ ಮುಖ್ಯ ಚಿತ್ರಗಳು.
ವಿಭಿನ್ನ ಭಾಷೆಗಳ 100ಕ್ಕೂ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಇವರಿಗೆ ಪ್ರಶಸ್ತಿಗಳು, ಸನ್ಮಾನ, ಗೌರವ ಲಭಿಸಿದೆ.
ಎಷ್ಟೇ ಕಷ್ಟದ ಜೀವನ ಸಾಗಿಸುತ್ತಿದ್ದರೂ ಪ್ರಾಮಾಣಿಕತೆಯೊಂದಿಗೆ ಏನಾದರೂ ಸಾಸಬೇಕು, ಕಠಿಣ ಪರಿಶ್ರಮ ಮುಖೇನ ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಹುಮ್ಮಸ್ಸಿನಿಂದ ಮುನ್ನುಗ್ಗುವ ಇವರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಲಭಿಸಲಿ. ನಮ್ಮೂರ ಕಲಾವಿದ ಎಲ್ಲೆಡೆ ಮಿಂಚಲಿ ಎನ್ನುವುದು ಕರಾವಳಿ ಚಿತ್ರಪ್ರಿಯರ ಹರಕೆ, ಹಾರೈಕೆ.
»ಸುಮಲತಾ ಹೆಬ್ಬಾರ್