ಒಟಿಪಿ‌ ನೀಡಿ ಹಣ ಕಳೆದುಕೊಂಡ ನಿವೃತ್ತ ಡಿಜಿ-ಐಜಿಪಿ

ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಶಂಕರ್ ಬಿದರಿ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ₹ 89 ಸಾವಿರ ಕಳೆದುಕೊಂಡಿರುವ ಘಟನೆ ನಡೆದಿದೆ.

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಾಯವಾಣಿ ಪ್ರತಿನಿಧಿ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು ನಿವೃತ್ತ ಡಿಜಿ‌ ಅನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.
ಬ್ಯಾಂಕ್ ಖಾತೆಯ ಪ್ಯಾನ್‌ ನಂಬರ್ ನವೀಕರಣ ಮಾಡಬೇಕು ಎಂದು ಸೈಬರ್ ವಂಚಕರ ಮಾತು ನಂಬಿ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ನೀಡಿ ಶಂಕರ ಬಿದರಿ‌ ಹಣ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಶಂಕರ್ ಬಿದರಿ ದೂರು ನೀಡಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರ್ ಬಿದರಿ ಮೊಬೈಲ್‌ಗೆ ಅ. 11ರಂದು ಸಂದೇಶ ಕಳುಹಿಸಿದ್ದ ವಂಚಕರು, ‘ನಿಮ್ಮ ಪ್ಯಾನ್ ನಂಬರ್ ನವೀಕರಣ ಮಾಡಬೇಕು. ಮಾಡದಿದ್ದರೆ, ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ ಎಂಬುದಾಗಿ ಹೇಳಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಂದೇಶ ಬಂದ ಕೆಲ ಹೊತ್ತಿನ ನಂತರ ಬಿದರಿ ಅವರಿಗೆ ಕರೆ ಮಾಡಿದ್ದ ವಂಚಕರು, ಎಸ್‌ಬಿಐ ಸಹಾಯವಾಣಿ ಪ್ರತಿನಿಧಿ ಎಂಬುದಾಗಿ ಪರಿಚಯಿಸಿಕೊಂಡಿದ್ದರು. ಪ್ಯಾನ್‌ ನಂಬರ್ ನವೀಕರಣ ಮಾಡುತ್ತಿದ್ದೇವೆ. ನಿಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿ ತಿಳಿಸಿ ಎಂದಿದ್ದರು. ಅವರ ಮಾತು ನಂಬಿದ್ದ ಶಂಕರ್ ಬಿದರಿ, ಒಟಿಪಿ ಹಂಚಿಕೊಂಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಖಾತೆಯಿಂದ ₹ 89 ಸಾವಿರ ಕಡಿತವಾಗಿದೆ ಎಂದೂ ಮೂಲಗಳು ಹೇಳಿವೆ.