ಕಾರ್ಕಳ: ತಾಲ್ಲೂಕಿನಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕರಿಲ್ಲದೆ ಸೊರಗುತ್ತಿರುವ ಕಾರ್ಕಳ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲಾ ಕಾಂಗ್ರೆಸ್ ನಾಯಕರ ವಿರುದ್ಧವೇ ಸ್ಥಳೀಯ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.
ಹೌದು, ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಇಂದು ಆಯೋಜಿಸಿದ್ದ ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ಕೆಲಸ ನಾಯಕರು ಆಕ್ರೋಶ ಹೊರಹಾಕಿದರು.
ಕಾರ್ಯಕ್ರಮದ ಮಧ್ಯೆ ಮಾತನಾಡಿದ ಮಿಯ್ಯಾರು ಗ್ರಾಪಂ ಸದಸ್ಯ ಡೇನಿಯಲ್ ರೇಂಜರ್ ಅವರು, ಕಾರ್ಕಳದಲ್ಲಿ ಕಾಂಗ್ರೆಸ್ಗೆ ಸೂಕ್ತ ನಾಯಕತ್ವದ ಕೊರತೆ ಇದೆ. ಪಕ್ಷವನ್ನು ಸಮರ್ಥವಾಗಿ ನಿಭಾಯಿಸುವ ನಾಯಕರಿಲ್ಲ. ಇದರಿಂದ ಗ್ರಾಪಂ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ನಾನೊಬ್ಬ ಕಾಂಗ್ರೆಸ್ಸಿಗ ಎನ್ನುವುದಕ್ಕೂ ಭಯಪಡುವಂತಹ ವಾತಾವರಣವಿದೆ. ತಾಲೂಕಿನಲ್ಲಿ ಇಂತಹ ಸ್ಥಿತಿ ಇರುವಾಗ ನಾವು ಅಭಿನಂದನೆಗೆ ಅರ್ಹರೇ ಎಂದು ನಾಯಕರನ್ನು ಪ್ರಶ್ನಿಸಿದರು.
ಚುನಾವಣೆ ವೇಳೆ ನಾಯಕರಿಂದ ಆರ್ಥಿಕ ನೆರವು ಬಿಡಿ, ನೈತಿಕ ಬೆಂಬಲವೂ ಸಿಕ್ಕಿಲ್ಲ. ಯಾವ ನಾಯಕರು ಸಹ ನಮ್ಮನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೆಂದು ಬೆಂಬಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಕಾರ್ಯಕರ್ತರು ಡೇನಿಯಲ್ ಅವರ ಹೇಳಿಕೆಯನ್ನು ಚಪ್ಪಾಳೆ ತಟ್ಟಿ ಬೆಂಬಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು, ಶೀಘ್ರದಲ್ಲೇ ಕಾರ್ಕಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಲಿದ್ದು, ಕಾರ್ಯಕರ್ತರ ಅಭಿಪ್ರಾಯ ಪಡೆದು ಸೂಕ್ತ ನಾಯಕರನ್ನು ಆಯ್ಕೆ ಮಾಡುವರು.
ಮುಂದಿನ ದಿನಗಳಲ್ಲಿ ತಾನೇ ಖುದ್ದಾಗಿ ಕಾರ್ಕಳದ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗುತ್ತೇನೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷವು ಹೆಚ್ಚು ಸ್ಥಾನ ಗೆಲ್ಲಲು ಎಲ್ಲರೂ ಕೈಜೋಡಿಸಬೇಕು. ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ. ಅದನ್ನು ಕೆಪಿಪಿಸಿ ಅಧ್ಯಕ್ಷರು ಶೀಘ್ರದಲ್ಲೇ ಬಗೆಹರಿಸಲಿದ್ದಾರೆ. ಕಾರ್ಕಳದಲ್ಲಿ ಮತ್ತೆ ತಳಮಟ್ಟದಿಂದ ಪಕ್ಷವನ್ನು ಕಟ್ಟೋಣ ಎಂದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಂತಿ ಶೆಟ್ಟಿ, ಕಿಸಾನ್ ಘಟಕದ ರಾಜ್ಯ ಕಾರ್ಯದರ್ಶಿ ಉದಯ ಶೆಟ್ಟಿ, ಯುವ ಕಾಂಗ್ರೆಸ್ನ ರಾಜ್ಯ ಕಾರ್ಯದರ್ಶಿ ರವಿಶಂಕರ್ ಶೇರಿಗಾರ ಮೊದಲಾದವರು ಉಪಸ್ಥಿತರಿದ್ದರು.