ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್ ಮಾಫಿ ಸಾಕ್ಷಿ (ಅಪ್ರೂವರ್) ಆಗಲು ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಇದೀಗ ಅವರ ಸಾಕ್ಷ್ಯ ದಾಖಲಿಸಲು ನ್ಯಾಯಾಲಯ ಮುಂದಾಗಿದೆ.
ಪ್ರದೋಷ್ ಅವರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲು 59ನೇ ಸಿಸಿಹೆಚ್ ನ್ಯಾಯಾಲಯ ವಿಟ್ನೆಸ್ ಸಮನ್ಸ್ ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಪ್ರದೋಷ್ಗೆ ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಲು ಆದೇಶಿಸಿದೆ.
ಜೈಲಿನಲ್ಲಿರುವ ಪ್ರದೋಷ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ 59ನೇ ಸಿಸಿಹೆಚ್ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಆದೇಶ ನೀಡಿದ್ದಾರೆ.
ಮಾಫಿ ಸಾಕ್ಷಿಯಾಗಲು ಒಪ್ಪಿಗೆ
ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಕೋರ್ಟ್ ಇತ್ತೀಚೆಗೆ ಅಂಗೀಕರಿಸಿತ್ತು. ಸಿಸಿಹೆಚ್ 42ನೇ ನ್ಯಾಯಾಲಯವು ಪ್ರದೋಷ್ ಅಪ್ರೂವರ್ ಆಗಲು ಅನುಮತಿ ನೀಡಿತ್ತು.
ಮಾಫಿ ಸಾಕ್ಷಿಯಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ಸತ್ಯಾಂಶಗಳನ್ನು ನ್ಯಾಯಾಲಯದ ಮುಂದೆ ಹೇಳಬೇಕಾಗುತ್ತದೆ. ಸಾಕ್ಷ್ಯ ನೀಡುವ ವೇಳೆ ಸುಳ್ಳು ಹೇಳಿದರೆ ಕಾನೂನು ಕ್ರಮಕ್ಕೆ ಒಳಗಾಗುವ ಸಾಧ್ಯತೆಯೂ ಇದೆ.
ದರ್ಶನ್ ಸೇರಿದಂತೆ 16 ಆರೋಪಿಗಳಿಗೆ ಆತಂಕ
ಪ್ರದೋಷ್ ಇದೀಗ ಅಪ್ರೂವರ್ ಆಗಿ ಸಾಕ್ಷ್ಯ ನೀಡಲಿರುವುದರಿಂದ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಪ್ರಕರಣದ ಇತರ ಆರೋಪಿಗಳ ವಿರುದ್ಧ ಪ್ರದೋಷ್ ನೀಡುವ ಸಾಕ್ಷ್ಯಗಳು ನಿರ್ಣಾಯಕವಾಗುವ ಸಾಧ್ಯತೆಯಿದೆ.
ಪ್ರಮುಖವಾಗಿ ನಟ ದರ್ಶನ್ ಹಾಗೂ ಪ್ರಕರಣದ ಇತರ ಆರೋಪಿಗಳ ವಿರುದ್ಧ ಪ್ರದೋಷ್ ಏನೆಲ್ಲಾ ಹೇಳಿಕೆ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಹೀಗಾಗಿ ಅವರ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆಯಾಗುವ ನಿರೀಕ್ಷೆಯಿದೆ.















