ಪ್ರಖ್ಯಾತ ಸಾಹಿತಿ ಕೆ.ಟಿ.ಗಟ್ಟಿ ನಿಧನ

ಮಂಗಳೂರು: ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿದ್ದ, ಸಾಹಿತ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳ ಕುರಿತ ಲೇಖಕ, ನಿವೃತ್ತ ಪ್ರಾಧ್ಯಾಪಕ ಕೆ.ಟಿ.ಗಟ್ಟಿ (86) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

ಪತ್ನಿ ನಿವೃತ್ತ ಶಿಕ್ಷಕಿ ಯಶೋದಾ, ಪುತ್ರ ನಿಟ್ಟೆ ವಿವಿಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕ ಸತ್ಯಜಿತ್, ಪುತ್ರಿಯರಾದ ಅಮೆರಿಕದಲ್ಲಿ ಪರಿಸರ ವಿಜ್ಞಾನಿಯಾಗಿರುವ ಪ್ರಿಯದರ್ಶಿನಿ, ಆಸ್ಟ್ರಿಯಾದಲ್ಲಿ ಆಂಥ್ರಾಪಾಲಜಿಸ್ಟ್ ಆಗಿರುವ ಚಿತ್ ಪ್ರಭಾ ಅವರನ್ನು ಅಗಲಿದ್ದಾರೆ.

ಕಾರ್ಮುಗಿಲು, ಪುನರಪಿ ಜನನಂ, ಬಿಸಿಲುಗುದುರೆ, ಕಾಮರೂಪಿ, ಸನ್ನಿವೇಶ, ಉರಿ, ಶಬ್ದಗಳು, ನಿರಂತರ, ಸ್ವರ್ಣ ಮೃಗ, ಅಬ್ರಾಹ್ಮಣ, ಪರುಷ, ಅಶ್ರುತ ಗಾನ, ಅರಗಿನ ಅರಮನೆ, ಶಿಲಾ ತಪಸ್ವಿ, ಸನ್ನಿವೇಶ, ಗ್ಲಾನಿ, ಪರಮಾರ್ಥ, ಪರಿಧಿ, ಪೂಜಾರಿ, ಮನೆ, ಕೆಂಪು ಕಳವೆ, ಕರ್ಮಣ್ಯೇ ವಾಧಿಕಾರಸ್ತೆ, ಭೂಮಿಗೀತೆ, ಕೂಪ, ಅಪೂರ್ಣ, ಸುಖಾಂತ, ಸಾಫಲ್ಯ, ಕಾಮಯಜ್ಞ, ಅವಿಭಕ್ತರು, ರಸಾತಳ, ನವೆಂಬರ್ 10, ಯುಗಾಂತರ, ಮಿತಿ, ರಾಗಲಹರಿ, ಮೃತ್ಯೋರ್ಮಾ ಅಮೃತಂ ಗಮಯ, ಏಳು ಮಲ್ಲಿಗೆ ತೂಕದ ಹುಡುಗಿ, ಇತಿಹಾಸದ ಮೊಗಸಾಲೆಯಲ್ಲಿ, ಅನಂತರ, ಅಂತರಂಗದ ಅತಿಥಿ, ಯುದ್ಧ ಮುಂತಾದವು ಅವರ ಪ್ರಮುಖ ಕಾದಂಬರಿಗಳು.

ಮೂರನೆಯ ಧ್ವನಿ (ಸಾಹಿತ್ಯ ಚಿಂತನ), ನಿನ್ನೆ ನಾಳೆಗಳ ನಡುವೆ (ಸಾಮಾಜಿಕ ಚಿಂತನ), ನಮ್ಮ ಬದುಕಿನ ಪುಟಗಳು, ‘ನಮ್ಮೊಳಗಿನ ಆಕಾಶ’, ‘ನಾಲ್ಕುದಿಕ್ಕು ಮತ್ತು ಅಂತರಾಳದ ತಂತಿ’ (ವೈಚಾರಿಕ ಲೇಖನಗಳು)ಕೃತಿ ರೂಪದಲ್ಲಿ ಪ್ರಕಟಗೊಂಡಿವೆ. ‘ಝೇಂಕಾರದ ಹಕ್ಕಿ’ ಹಾಗೂ ಇಂಗ್ಲಿಷ್‌ ಗೀತೆಗಳ ಅನುವಾದ ‘ನನ್ನ ಪ್ರೇಮದ ಹುಡುಗಿ’ ಅವರ ಕಾವ್ಯಗಳು.

ನಾಟ್ಕ, ಕೆಂಪು ಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿ ದೇವರ ಜುಗಾರಿ ಮುಂತಾದ ಅವರು ಬರೆದ ನಾಟಕಗಳು. ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು, ಪಂಜಾಬಿ ಮುಂತಾದ ಭಾಷೆಗಳಿಗೆ ನಾಟಕಗಳು ಅನುವಾದಗೊಂಡಿವೆ.

ಲಂಡನ್‌ನಲ್ಲಿ ಡಿಪ್ಲೊಮಾ ಪಡೆದ ಅವರ ಸಾಹಿತ್ಯ ಕೃಷಿ ಆರಂಭವಾದದ್ದು 1957ರಲ್ಲಿ. ಕೆ.ಟಿ. ಗಟ್ಟಿ ಅವರ ತಂದೆ ಧೂಮಪ್ಪ ಗಟ್ಟಿ. ತಾಯಿ ಪರಮೇಶ್ವರಿ.