ಉಡುಪಿ: ನಗರದ ಕೆ.ಎಂ ಮಾರ್ಗದಲ್ಲಿರುವ ನಿತ್ಯಾನಂದ ಸ್ವಾಮಿ ಮಂದಿರ ಮಠವು ನವೀಕೃತಗೊಂಡಿದ್ದು ಜ.16 ರಂದು ಮಂದಿರ ಲೋಕಾರ್ಪಣೆ, ಗರ್ಭಗೃಹ ಸಮರ್ಪಣೆ, ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್, ಮಂದಿರದ ಜೊತೆ ಜೊತೆಗೆ ಶೈಕ್ಷಣಿಕ, ಹಾಗೂ ಆರೋಗ್ಯ ಸಂಸ್ಥೆಗಳು ಕೂಡಾ ಸ್ಥಾಪನೆಯಾಗಲಿ.
ಅಷ್ಟ ಮಠಗಳಿಗೆ ಖ್ಯಾತಿ ಪಡೆದ ಉಡುಪಿ ನಗರದ ಮುಕುಟಕ್ಕೆ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಇನ್ನೊಂದು ಗರಿ ಪೋಣಿಸಿದಂತಾಗಿದೆ. ಈ ಮಂದಿರದ ಜತೆಜತೆಗೆ ಶೈಕ್ಷಣಿಕ, ಆರೋಗ್ಯ ಸಂಸ್ಥೆಗಳು ಸ್ಥಾಪನೆಗೊಂಡಾಗ ಭಕ್ತರ ಆಶೋತ್ತರಗಳು ಈಡೇರಿ ಮಂದಿರವು ಉನ್ನತಿಯನ್ನು ಹೊಂದಲಿದೆ ಎಂದರು.
ಈ ಭವ್ಯ ಮಂದಿರದ ನವೀಕರಣಕ್ಕಾಗಿ ಮಹಾದಾನಿ ಕೆ.ಕೆ. ಆವರ್ಸೇಕರ್ ಸಹಿತ ಎಲ್ಲ ಭಕ್ತರಿಗೆ ನಿತ್ಯಾನಂದ ಸ್ವಾಮಿಯೇ ಪ್ರೇರಣೆ ನೀಡಿ ಮಂದಿರವು ಅಭಿವೃದ್ಧಿ ಕಂಡಿದೆ. ಶಿಕ್ಷಣ, ಆರೋಗ್ಯ ಸಂಸ್ಥೆಗಳ ಸ್ಥಾಪನೆ ಹಾಗೂ ಮಂದಿರದ ಅಭಿವೃದ್ಧಿ ಕಾರ್ಯಕ್ಕೆ ಮಾಹೆ ವಿ.ವಿ.ಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಭಾರತದ ಆತ್ಮ ಆಧ್ಯಾತ್ಮ. ಆಧ್ಯಾತ್ಮವನ್ನು ಬೆಳೆಸುವುದಕ್ಕೆ ಮಂದಿರಗಳ ಅವಶ್ಯಕತೆ ಇದೆ. ಅಂತಹ ಅದ್ಬುತವಾದ ಮಂದಿರವನ್ನು ಉಡುಪಿಯಲ್ಲಿ ಸ್ಥಾಪಿಸುವ ಮೂಲಕ ಅದ್ಬುತ ಕೆಲಸವಾಗಿದೆ ಎಂದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಹೃದಯಭಾಗ ಉಡುಪಿಗೆ ಮುಕುಟಪ್ರಾಯವಾಗಿ ನಿತ್ಯಾನಂದ ಮಂದಿರ ಮಠ ನವೀಕರಣಗೊಂಡಿದೆ. ಕೆ.ಕೆ. ಆವರ್ಸೇಕರ್ ಕೊಡುಗೆ ಉಡುಪಿಯಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ. ದೇಗುಲಕ್ಕೆ ಸಾಗುವ ಮಾರ್ಗ ಕಿರಿದಾಗಿದ್ದು, ಅದರ ವಿಸ್ತರಣೆಗೆ ಅನುವು ಮಾಡಿಕೊಡುವ ಚಿಂತನೆ ನಡೆಸಲಾಗಿದೆ. ಅಲ್ಲದೆ ಮಂದಿರವು ರಾಜ ಬೀದಿಗೆ ಶೋಭಾಯಾಮಾನವಾಗಿ ಕಾಣಲು, ಹೆಚ್ಚಿನ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಎದುರಿನಲ್ಲಿರುವ ಕಟ್ಟಡಗಳ ತೆರವಿಗೂ ಪ್ರಯತ್ನಿಸಲಾಗುವುದು. ಅತ್ಯಂತ ಇಕ್ಕಟ್ಟಿನ ಸ್ಥಳದಲ್ಲಿ 10 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸುವುದು ನಿತ್ಯಾನಂದ ಸ್ವಾಮಿಯ ಪವಾಡ ಎನ್ನಬಹುದು ಎಂದರು.
ಮುಂಬಯಿ ಉದ್ಯಮಿ ಮಂದಿರ ನಿರ್ಮಾತೃ ಕೆ.ಕೆ. ಆವರ್ಸೇಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೌರವ ಸಲಹೆಗಾರ ಮತ್ತು ಮಾರ್ಗದರ್ಶಕ ಶ್ರೀಧಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ತುಂಗಾರೇಶ್ವರ ಶ್ರೀ ಸದಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಪುಷ್ಪಾ ಆವರ್ಸೇಕರ್, ಮುಂಬಯಿ ಉದ್ಯಮಿ ಸುರೇಂದ್ರ ಕಲ್ಯಾಣಪುರ, ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಅಧ್ಯಕ್ಷ ಕೊಡವೂರು ದಿವಾಕರ ಶೆಟ್ಟಿ, ಜಯಕೃಷ್ಣ ಶೆಟ್ಟಿ ತೋನ್ಸೆ, ಹರ್ಷ ಗ್ರೂಪ್ ನ ಸೂರ್ಯಪ್ರಕಾಶ್, ಆರ್ಕಿಟೆಕ್ಟ್ ಶ್ರೀನಾಗೇಶ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ನವೀನ್ ಶೆಟ್ಟಿ ತೋನ್ಸೆ, ಸಿಎ ಸಿ.ಕೆ. ಪಾಟೀಲ್ ಮುಂಬಯಿ, ಗಣೇಶ ಪುರಿ ಭೀಮೇಶ್ವರ ಸದ್ಗುರು ನಿತ್ಯಾನಂದ ಸಂಸ್ಥಾನದ ಟ್ರಸ್ಟಿ ನ್ಯಾಯವಾದಿ ಸಂಧ್ಯಾ ಜಾಧವ್, ಮುಂಬಯಿಯ ನ್ಯಾಯಾಧೀಶೆ ಯಶಸ್ವಿ ಮರಳೋಕರ್, ಪ್ರಪುಲ್ಲಾ ಜಯ ಶೆಟ್ಟಿ, ಡಾ.ಅಶೋಕ್ ಶೆಟ್ಟಿ ಸೂರತ್, ಬಾಲಕೃಷ್ಣ ಶೆಟ್ಟಿ, ಜಗನ್ನಾಥ್ ಹೆಗ್ಡೆ, ನಿರಂಜನ್ ಮುಂಬಯಿ, ನವೀನ್ ಶೆಟ್ಟಿ ತೋನ್ಸೆ, ಕಾಂಞಂಗಾಡ್ ಟ್ರಸ್ಟ್ ನ ಎಂ. ನರಸಿಂಹ ಶೆಣೈ, ಕೆ. ಮೋಹನ್ ಚಂದ್ರನ್ ನಂಬಿಯಾರ್ ಮತ್ತಿತರು ಉಪಸ್ಥಿತರಿದ್ದರು.
ಕಾಂಞಂಗಾಡ್ ಟ್ರಸ್ಟ್ ನ ಟ್ರಸ್ಟಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕಲಾ ಜಗತ್ತು ವಿಜಯಕುಮಾರ್ ಶೆಟ್ಟಿ ನಿರೂಪಿಸಿದರು.