ಏಪ್ರಿಲ್ 30 ರ ಒಳಗೆ ಮಕ್ಕಳ ಪಾಲನಾ ಸಂಸ್ಥೆಗಳನ್ನು ನೋಂದಾಯಿಸಿ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿರುವ 0-18 ವರ್ಷದೊಳಗಿನ ಪಾಲನೆ ಹಾಗೂ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳು ಕಡ್ಡಾಯವಾಗಿ ಬಾಲನ್ಯಾಯ ಕಾಯ್ದೆ-2015ರಡಿ ನೋಂದಾವಣೆಗೊಂಡಿರಬೇಕು. ಯಾವುದೇ ಮಕ್ಕಳ ಪಾಲನಾ ಸಂಸ್ಥೆಗಳು, ಮಠ, ಮದ್ರಸಾ, ಚರ್ಚ್ಗಳಲ್ಲಿ ಮಕ್ಕಳನ್ನು ದಾಖಲಿಸಿ, ಮಕ್ಕಳ ಪಾಲನಾ ಸಂಸ್ಥೆಗಳನ್ನು ಸರ್ಕಾರದ ನೋಂದಣಿ ಇಲ್ಲದೇ ನಡೆಸುತ್ತಿದ್ದಲ್ಲಿ ಅವುಗಳನ್ನು ಏಪ್ರಿಲ್ 30 ರ ಒಳಗೆ ನೋಂದಾಯಿಸಿಕೊಳ್ಳಬೇಕು.

ಅನಾಥ, ಪರಿತ್ಯಕ್ತ, ಪಾಲನೆ, ಪೋಷಣೆ ಹಾಗೂ ರಕ್ಷಣೆಗೆ ಅಗತ್ಯವಿರುವ ಮಕ್ಕಳನ್ನು ಹೊಂದಿದ್ದು, ಔಪಚಾರಿಕ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿರದೇ ಬಾಲನ್ಯಾಯ ಕಾಯ್ದೆ 2015 ರಡಿ ನೋಂದಾಯಿಸದೇ ಕಾರ್ಯನಿರ್ವಹಿಸುತ್ತಿದ್ದರೆ ಅವರ ವಿರುದ್ಧ ಬಾಲನ್ಯಾಯ ಕಾಯ್ದೆ 2015ರ ಸೆಕ್ಷನ್ 33, 34, 41, 42 ಮತ್ತು 75 ರಡಿ ಕಾನೂನು ಕ್ರಮ ಜರುಗಿಸಲಾಗುವುದು. ಹೊಸದಾಗಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವವರು ಬಾಲನ್ಯಾಯ ಕಾಯ್ದೆ 2015 ಕಲಂ 41ರನ್ವಯ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 1ನೇ ಮಹಡಿ ಬಿ ಬ್ಲಾಕ್, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ರಜತಾದ್ರಿ ಮಣಿಪಾಲ ಉಡುಪಿ, ದೂರವಾಣಿ ಸಂಖ್ಯೆ: 0820-2574964 ಇ-ಮೇಲ್: dcpuudupi@gmail.com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.