ಅನ್ನಭಾಗ್ಯ ಯೋಜನೆಗೆ ಅಕ್ಕಿ ನಿರಾಕರಣೆ ಕೇಂದ್ರ ಸರ್ಕಾರದ ಕೊಳಕು ರಾಜಕೀಯಕ್ಕೆ ಸಾಕ್ಷಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ನಿಲ್ಲಿಸುವ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅವರೇನು ಪುಕ್ಕಟ್ಟೆ ಕೊಡುತ್ತಿರಲಿಲ್ಲ, ಕೆಜಿಗೆ 34 ರೂ ನಮ್ಮಿಂದ ತಗೊಳ್ಳುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ವಿಧಾನಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅನ್ನ ಭಾಗ್ಯ ಯೋಜನೆಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ನಿಲ್ಲಿಸಿದ ಕೇಂದ್ರ ಸರ್ಕಾರ ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು. ಆದರೆ ಈಗ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ ಬೇಡವೋ? ಇದನ್ನು ಕನ್ನಡ ಜನತೆ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಬೇಡವೋ ಎಂದು ಮಾಧ್ಯಮಗಳ ಮೂಲಕ ನಾಡಿನ ಜನತೆಯನ್ನು ಪ್ರಶ್ನಿಸಿದರು.

4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170 ರೂ. ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು-ಮಧ್ಯಮ ವರ್ಗದವರು ಎರಡು ಹೊತ್ತು ತಿಂದರೆ ಬಿಜೆಪಿಗೆ ಏನು ಹೊಟ್ಟೆಯುರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಿಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಿರ್ವಹಿಸಿ ಎಂದು ಕರೆ ನೀಡಿದರು.

ನೆಮ್ಮದಿಯ ಬದುಕಿಗೆ ಆಹಾರ ಭದ್ರತೆ ಅನ್ನಭಾಗ್ಯ ಎನ್ನುವ ಘೋಷವಾಕ್ಯದಲ್ಲಿ ಚಾರಿತ್ರಿಕವಾದ ಕಾರ್ಯಕ್ರಮಕ್ಕೆ ಸರ್ಕಾರ ರಚನೆಯಾಗಿ 50ನೇ ದಿನದಂದು ಚಾಲನೆ ನೀಡಲಾಯಿತು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನ್ನಭಾಗ್ಯದ ಲೋಗೋ ಬಿಡುಗಡೆ ಮಾಡಿದರು. ಯೋಜನೆಯ ಮಾಹಿತಿ ಪತ್ರವನ್ನು ಆರೋಗ್ಯ ಸಚಿವ ಕೆ.ಹೆಚ್.ಮುನಿಯಪ್ಪ ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ರಾಮಲಿಂಗಾರೆಡ್ಡಿ, ಬಿ.ಎಸ್.ಸುರೇಶ್, ಹೆಚ್.ಕೆ.ಪಾಟೀಲ್ ಸೇರಿ ಹಲವು ಸಚಿವರು ಮತ್ತು ಶಾಸಕರು ಉಪಸ್ಥಿತರಿದ್ದರು.