ಉಡುಪಿ ಜಿಲ್ಲೆಯಲ್ಲಿ ತಗ್ಗಿದ ಕೊರೊನಾ: ಇಂದು 640 ಮಂದಿಗೆ ಪಾಸಿಟಿವ್; ಉಡುಪಿಯ ಮೂವರು ಸಹಿತ ನಾಲ್ವರು ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಕೊರೊನಾ ಇಳಿಕೆಯಾಗಿದ್ದು, 640 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 368, ಕುಂದಾಪುರ ತಾಲೂಕಿನಲ್ಲಿ 155, ಕಾರ್ಕಳ ತಾಲೂಕಿನಲ್ಲಿ‌ 115 ಹಾಗೂ ಹೊರ ಜಿಲ್ಲೆಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5792ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು ಕೂಡ 4 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 33 ವರ್ಷದ ಯುವಕ, 65 ವರ್ಷದ ವ್ಯಕ್ತಿ, 67 ವರ್ಷದ ಮಹಿಳೆ ವ್ಯಕ್ತಿಗಳು ಹಾಗೂ ಕಾರ್ಕಳ ತಾಲೂಕಿನ 54 ವರ್ಷದ ವ್ಯಕ್ತಿ ಸೋಂಕಿನಿಂದ ಅಸುನೀಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 310 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಮೇ 24ರಂದು ಜಿಲ್ಲೆಯಲ್ಲಿ 695 ಮಂದಿ ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಆ ಮೂಲಕ ಕೋವಿಡ್ ಎರಡನೇ ಅಲೆಯಲ್ಲಿ ಈವರೆಗೆ ಒಟ್ಟು 24705 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,03,864 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 30,617 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

2 ಮಂದಿಗೆ ಬ್ಲ್ಯಾಕ್ ಫಂಗಸ್:
ಇಂದು ಹೊರ ಜಿಲ್ಲೆಯ ಇಬ್ಬರು ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರೊಂದಿಗೆ
ಜಿಲ್ಲೆಯಲ್ಲಿ 11 ಮಂದಿ ಬ್ಲಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿಯಲ್ಲಿ 2, ಕುಂದಾಪುರದಲ್ಲಿ 1 ಹಾಗೂ ಹೊರ ಜಿಲ್ಲೆಯ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಉಡುಪಿ ತಾಲೂಕಿನ ಓರ್ವ ವ್ಯಕ್ತಿ ಈಗಾಗಲೇ ಬ್ಲ್ಯಾಕ್ ಫಂಗಸ್ ನಿಂದ ಮೃತಪಟ್ಟಿದ್ದಾರೆ.