ರೆಡ್‌ಕ್ರಾಸ್ ಸೇವೆ ಶ್ಲಾಘನೀಯ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಕೋವಿಡ್ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ನಡೆಸಿದಂತಹ ಪ್ರತಿಯೊಂದು ಕಾರ್ಯ ಶ್ಲಾಘನೀಯವಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿಯೂ ಕೂಡ ಶ್ರಮ ವಹಿಸಿ, ಸಾಮಾಜಿಕ ಕೆಲಸಗಳನ್ನು ಮಾಡಿದ ಹೆಗ್ಗಳಿಕೆ ರೆಡ್‌ಕ್ರಾಸ್ ಸಂಸ್ಥೆಯದ್ದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ತಿಳಿಸಿದರು.

ಅವರು ಇಂದು ನಗರದ ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಶಾಖೆ ಇವರ ಆಶ್ರಯದಲ್ಲಿ ನಡೆದ ಪರಿಪೋಷಣಂ ಯೋಜನೆಯಡಿ ಅಂತರ್ಗತ ಪ್ರೌಢಶಾಲೆಗಳ ಜೂನಿಯರ್ ರೆಡ್‌ಕ್ರಾಸ್ ಕೌನ್ಸಿಲರ್‌ಗಳಿಗೆ ಎರಡು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ರೆಡ್‌ಕ್ರಾಸ್ ಸಂಸ್ಥೆಯು ತನ್ನದೇ ಆದ ಸೇವಾ ಮನೋಭಾವವನ್ನು ಹೊಂದಿದ್ದು, ಎಲ್ಲರಲ್ಲಿಯೂ ಉತ್ಸಾಹ ತುಂಬುವ ಕೆಲಸವನ್ನು ಮಾಡುತ್ತಾ ಬಂದಿದೆ. ಕೊರೋನಾ ಕಾಲದ ಪ್ರತಿ ಹಂತದಲ್ಲಿಯೂ ರೆಡ್‌ಕ್ರಾಸ್‌ನ ಕೊಡುಗೆ ಅಪಾರವಾಗಿದೆ. ಉಚಿತವಾಗಿ ಮಾಸ್ಕ್ ಸಾರ್ವಜನಿಕರಿಗೆ ತಲುಪಿಸುವುದು ಸೇರಿದಂತೆ ಆಹಾರ ವ್ಯವಸ್ಥೆಯ ಕಾರ್ಯವನ್ನು ಕೂಡ ಹಮ್ಮಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೊರೋನಾದಿಂದ ನೊಂದ ಬಡ ಕುಟುಂಬಗಳನ್ನು ಗುರುತಿಸಿ, ಅವರಿಗೆ ದಿನಸಿ ಕಿಟ್ ಕೂಡ ವಿತರಿಸಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಸೇವಾ ಹಾಗೂ ಧ್ಯೇಯ ಮನೋಭಾವವನ್ನು ನಾವು ಕಿರಿ ವಯಸ್ಸಿನಲ್ಲಿಯೇ ಅಳವಡಿಸಿಕೊಂಡು ಬಂದಲ್ಲಿ ಮುಂದೆ ಅದನ್ನು ಕಾರ್ಯ ರೂಪಕ್ಕೆ ತರಬಹುದು. ರೆಡ್‌ಕ್ರಾಸ್ ಸಂಸ್ಥೆ ಎಂದರೆ ಅದು ಕೇವಲ ನಿಸ್ವಾರ್ಥ ಸೇವಾ ಮನೋಭಾವ ಎಂದರು.

ಈ ಸಂಸ್ಥೆಯ ಬಗ್ಗೆ ಇನ್ನೂ ಅತೀ ಹೆಚ್ಚಿನ ಜಾಗೃತಿ ಜನರಲ್ಲಿ ಮೂಡಿಸಬೇಕು ಹಾಗೂ ಇನ್ನಷ್ಟು ಸೇವೆಗಳು ಸಂಸ್ಥೆಯಿಂದ ನಡೆಯಲಿ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಅಶೋಕ್ ಕಾಮತ್, ಶಿಕ್ಷಕ ಮತ್ತು ಸಾಮಾಜಿಕ ಪರಿವರ್ತನೆ ಬಗ್ಗೆ ತಮ್ಮ ದಿಕ್ಸೂಚಿ ಭಾಷಣದಲ್ಲಿ ತಿಳಿಸಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವದ ಮೌಲ್ಯಯುತ ಕಲಿಕೆ ಅತ್ಯಂತ ಅಗತ್ಯವಾಗಿದ್ದು, ರೆಡ್‌ಕ್ರಾಸ್ ಸಂಸ್ಥೆಯಿಂದ ನಡೆಸುವ ಪ್ರತಿಯೊಂದು ಚಟುವಟಿಕೆ ಮಕ್ಕಳಲ್ಲಿ ಪ್ರೌಢಾವಸ್ಥೆಯಲ್ಲಿಯೇ ಗುರಿ, ಧ್ಯೇಯ ಮತ್ತು ಸೇವೆಗಳ ಬಗ್ಗೆ ತಿಳಿಸುತ್ತದೆ ಎಂದು ಹೇಳಿದರು.

ಅಪಘಾತ ಸಂಭವಿಸಿದಾಗ ಎದುರಿಸುವ ಜಾಣ್ಮೆ ಹಾಗೂ ಘಟನೆ ನಡೆಯುವುದನ್ನು ತಪ್ಪಿಸುವ ಬಗ್ಗೆ ಮೊದಲೇ ತಿಳಿದಿರಬೇಕು ಹಾಗೂ ಎಲ್ಲಾ ಸಂದರ್ಭಗಳಲ್ಲಿನ ಸೇವೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡಬೇಕು ಎಂದು ಹೇಳಿದರು.

ಶಾಲೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಿ, ಅವರನ್ನು ಸಂಘಟಿಸಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಾಯಕತ್ವದ ಗುಣ ಹೊಂದಿದ ಮುಖ್ಯೋಪಾಧ್ಯಾಯರಿಂದ ಮಾತ್ರ ಒಳ್ಳೆಯ ವಿದ್ಯಾರ್ಥಿ ಗುಂಪನ್ನು ಸಂಘಟಿಸಲು ಸಾಧ್ಯ ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ತಮಿಳುನಾಡಿನಲ್ಲಿ ಜೂನಿಯರ್ ರೆಡ್‌ಕ್ರಾಸ್‌ನಲ್ಲಿ 42 ಲಕ್ಷ ಮಕ್ಕಳು ಭಾಗವಹಿಸಿದ್ದಾರೆ. ಅಂತೆಯೇ ನಮ್ಮಲ್ಲಿಯೂ ಕೂಡ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಸಂಸ್ಥೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕುಂದಾಪುರ ಶಾಖೆಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಎಸ್ ಶೆಟ್ಟಿ, ಜೂನಿಯರ್ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಎನ್ ರಾಜು, ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ, ಖಜಾಂಜಿ ರಮಾದೇವಿ, ಕಾರ್ಯದರ್ಶಿ ರತ್ನಾಕರ ಬಿ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯ ಜೂನಿಯರ್ ರೆಡ್‌ಕ್ರಾಸ್ ಡೈರೆಕ್ಟರ್ ಪದ್ಮಕಿಣಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.