ಉಡುಪಿ: ನಾನು ಟಿಕೆಟ್ ಆಕಾಂಕ್ಷಿಯಲ್ಲ, ಆದರೆ ಪಕ್ಷದ ಹಿರಿಯರು ಅಪೇಕ್ಷೆ ಪಟ್ಟರೆ ಜನಸೇವೆಗೆ ಸಿದ್ದ ಎಂದು ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದರು.
ಕೊಡವೂರು ವಾರ್ಡಿನಲ್ಲಿ ಕಳೆದ ಎರಡೂ ಕಾಲು ವರ್ಷದಿಂದ ಮಾಡಿದ ಅಭಿವೃದ್ದಿ ಕೆಲಸಗಳ ಮಾಹಿತಿಯನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಕೊಡವೂರು ವಾರ್ಡಿನ ಶಕ್ತಿ, ಸವಾಲು ಮತ್ತು ಅಪೇಕ್ಷೆಗಳ ಬಗ್ಗೆ ತಿಳಿಯಲು ಸರ್ವೇ ನಡೆಸಿ ಬಳಿಕ ಆ ಸರ್ವೆಯ ಮಾಹಿತಿಯನ್ನಾಧರಿಸಿ 17 ಸಮಿತಿಗಳನ್ನು ರಚನೆ ಮಾಡಿ, ದಿವ್ಯಾಂಗರು, ಕೃಷಿಕರು, ನಿರುದ್ಯೋಗಿಗಳು, ವಿದ್ಯಾರ್ಥಿಗಳು, ಕೆರೆಕಟ್ಟೆ, ಗೋವುಗಳು, ಧಾರ್ಮಿಕ ಕಾರ್ಯಕ್ರಮಗಳು, ಮಹಿಳೆಯರಿಗಾಗಿ ಸಮಿತಿಗಳನ್ನು ಮಾಡಿ ನ್ಯಾಯ ಒದಗಿಸುವ ಕೆಲಸಗಳನ್ನು ಮಾಡಲಾಗಿದೆ ಎಂದರು.
ತಾನು ಟಿಕೆಟ್ ಆಕಾಂಕ್ಷಿಯಲ್ಲ, ಆದರೆ ಕಾರ್ಯಕರ್ತನ ಸಾಮರ್ಥ್ಯ, ಶಕ್ತಿ ಮತ್ತು ಪಕ್ಷದ ಅವಶ್ಯಕತೆಗಳನ್ನು ತಿಳಿದು ಪಕ್ಷವೇ ಜವಾಬ್ದಾರಿ ನೀಡಿದರೆ ಸ್ವೀಕರಿಸಲು ಸಿದ್ದ. ಸ್ಮಾನ್ಯ ವ್ಯಕ್ತಿಗೆ ಜವಾಬ್ದಾರಿಯನ್ನು ನೀಡಿ ಎತ್ತರಕ್ಕೆ ಬೆಳೆಸುವ ಶಕ್ತಿ ಭಾರತೀಯ ಜನತಾ ಪಕ್ಷಕ್ಕಿದೆ. ಕಾರ್ಯಕರ್ತರ ಅಪೇಕ್ಷೆಯಂತೆ ಪಕ್ಷದ ಹಿರಿಯರು ಯೋಚನೆ ಮಾಡಿ ಅವಕಾಶ ನೀಡಿದರೆ ಖಂಡಿತವಾಗಿಯು ಜನಸೇವೆಗೆ ಸಿದ್ದ. ಅವಕಾಶ ದೊರೆಯದಿದ್ದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವೆ ಎಂದು ಅವರು ಹೇಳಿದರು.
ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್ ಹಾಗೂ ವಿವಿಧ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.