ರಾಜ್ಯ ಸರಕಾರದ ಜನವಿರೋಧಿ ನೀತಿ ಬಿಡದಿದ್ದರೆ ನಿತ್ಯ ಹೋರಾಟಕ್ಕೂ ಸಿದ್ದ: ಕಾಪು ಬಿಜೆಪಿ

ಕಾಪು: ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ಕಾಪು ಪೇಟೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್, ರಾಜ್ಯ ಸರಕಾರ ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿ ಇದೀಗ ವಾರ್ಷಿಕ ಸರಾಸರಿಯ ಶೇ.10 ರಷ್ಟು ಮಾತ್ರ ಉಚಿತ ಎನ್ನುತ್ತಾ ಜನರಿಗೆ ಕೊಟ್ಟ ವಚನ ಮುರಿದು ವಚನಭ್ರಷ್ಟವಾಗಿದೆ. ಅಲ್ಲದೆ ಪ್ರತಿ ಯುನಿಟ್ ವಿದ್ಯುತ್ ಗೆ ಸುಮಾರು 70 ಪೈಸೆ ಯಷ್ಟು ವಿದ್ಯತ್ ದರ ಏರಿಸಿ ಜನವಿರೋಧಿ ನೀತಿ ತೋರಿಸಿದ್ದಾರೆ ಎಂದರು.

ಪಶುಸಂಗೋಪನಾ ಇಲಾಖೆಯ ಸಚಿವ ವೆಂಕಟೇಶ್ ರವರು ಗೋವುಗಳನ್ನು ಯಾಕೆ ಕಡಿಯಬಾರದು ಎಂದು ಹಿಂದೂಗಳ ಭಾವನೆಗಳ ಮೇಲೆ ಚೆಲ್ಲಾಟವಾಡುವ ಮಾತನ್ನಾಡಿದ್ದಾರೆ. ಗೋವುಗಳೆಂದರೆ ಭಾರತೀಯರಿಗೆ ಪರಮ‌ ಪವಿತ್ರವಾದದು. ಯಾವುದೇ ಕೆಲಸ ಶುಭಾರಂಭ ಮಾಡುವುದಾದರೆ ಮೊದಲು ಗೋಪೂಜೆ ಮಾಡುವರು. ಗೃಹಪ್ರವೇಶ ಮಾಡುವುದಾರೂ ಮೊದಲು ಗೋವನ್ನು ಪ್ರವೇಶ ಮಾಡಿಸಿ ನಂತರ ನಾವು ಪ್ರವೇಶ ಮಾಡುವೆವು. ಭಾರತೀಯರದ್ದು ಗೋವು ಆಧಾರಿತ ಕೃಷಿ ಜೀವನ ಪದ್ಧತಿ. ಅಂತಹ ಗೋವುಗಳನ್ನು ಕಡಿಯುವ ಮಾತನ್ನಾಡುವ ಮೂಲಕ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವರು. ಈ ಕಾಯ್ದೆ ಹಿಂಪಡೆಯುವ ಪ್ರಯತ್ನ ಮಾಡಿದಲ್ಲಿ ಬಿಜೆಪಿ ಕಾರ್ಯಕರ್ತರು ನಿಮ್ಮ ಮುಂದಿನ ಎಲ್ಲ ಕಾರ್ಯಕ್ರಮಗಳಿಗೆ ಕಪ್ಟು ಬಾವುಟ ತೋರಿಸಿ ಪ್ರತಿಭಟನೆ ಮಾಡುವೆವು. ಗ್ರಾಮ ಗ್ರಾಮಗಳಲ್ಲಿ ಜನಜಾಗೃತಿ ಮೂಡಿಸುವೆವು ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ, ವೃದ್ಧ ಗೋವುಗಳನ್ನು ಏನು ಮಾಡುವುದು ಎಂಬ ಪ್ರಶ್ನೆಗೆ ನಿಮ್ಮ ವೃದ್ಧ ತಂದೆ ತಾಯಿ ಇದ್ದರೆ ಏನು ಮಾಡುವಿರೋ ಗೋವನ್ನೂ ಅದೇ ರೀತಿಯಲ್ಲಿ ನೋಡುವ ಸಂಸ್ಕ್ರತಿ ನಮ್ಮದು ಎಂದರು.

ಚಕ್ರವರ್ತಿ ಸೂಲಿಬೆಲೆ ಜೈಲು ಸೇರಬೇಕಾದೀತು ಎನ್ನುವ ಸಚಿವ ಎಮ್ ಬಿ‌ ಪಾಟೀಲ್ ಹೇಳಿಕೆ ಖಂಡಿಸಲಾಯಿತು ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿ ಬಿಡದಿದ್ದರೆ ನಿತ್ಯ ಹೋರಾಟಕ್ಕೂ ನಾವು ಸಿದ್ದ ಎನ್ನುವ ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಕಾಪು‌ ಮಂಡಲ ಉಪಾಧ್ಯಕ್ಷ ನವೀನ್ ಎಸ್ ಕೆ, ಚಂದ್ರಶೇಖರ್ ಕೋಟ್ಯನ್, ಸುಧಾಮ ಶೆಟ್ಟಿ, ಮಂಡಲ ಪ್ರಧಾನ‌ಕಾರ್ಯದರ್ಶಿ ಗೋಪಾಲಕ್ರಷ್ಣ ರಾವ್, ಮಂಡಲ ಕಾರ್ಯದರ್ಶಿಗಳಾದ ಲತಾ ಆಚಾರ್ಯ, ಚಂದ್ರ ಮಲ್ಲಾರ್, ಮಂಡಲ ಮಹಿಳಾಮೋರ್ಚ ಅಧ್ಯಕ್ಷೆ ಸುಮಾ ಶೆಟ್ಟಿ, ಎಸ್ ಸಿ ಮೋರ್ಚ ಅಧ್ಯಕ್ಷೆ ಎಮ್ ಜಿ ನಾಗೇಂದ್ರ, ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಶೈಲೇಶ್, ಪ್ರಮುಖರಾದ ಶರಣ್ ಕುಮಾರ್ ಮಟ್ಟು, ಪ್ರವೀಣ್ ಶೆಟ್ಟಿ ಇನ್ನಂಜೆ, ದಿನೇಶ್ ಕೋಟ್ಯಾನ್, ಜಗದೀಶ್ ಮೆಂಡನ್, ಶೈಲೇಶ್ ಶೆಟ್ಟಿ, ರಮಾ ಶೆಟ್ಟಿ, ಗೌರಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.