ಆರ್‌ಸಿಬಿಯಿಂದ ಬೆಂಗ್ಳೂರು ಮಾನ ಹರಾಜು, ತಂಡದ ಹೆಸರು ಬದಲಾಯಿಸುವಂತೆ ಸಾಮಾಜಿಕ ಕಾರ್ಯಕರ್ತನಿಂದ ಕ್ರಿಕೆಟ್ ಮಂಡಳಿಗೆ ಪತ್ರ

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಪರಿಣಾಮ ಬೆಂಗಳೂರಿನ ಮಾನ ಹರಾಜಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬವರು ರಾಜ್ಯ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದಾರೆ.

ಏನಿದೆ ಪತ್ರದಲ್ಲಿ?

ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರತಿಬಾರಿಯು ಆರ್‌ಸಿಬಿ ಕಳಪೆ ಪ್ರದರ್ಶನ ನೀಡುತ್ತಿದೆ. ಇಡೀ ತಂಡದಲ್ಲಿ ಯಾವ ಕನ್ನಡಿಗ ಆಟಗಾರ ಕೂಡ ಇಲ್ಲ. ಅಲ್ಲದೇ ರಾಜ್ಯದ ಕುಂಬ್ಳೆ ಅವರನ್ನು ಆ ಹುದ್ದೆಯಿಂದ ತೆಗೆಯಲು ತಂಡದ ನಾಯಕ ವಿರಾಟ್ ಕೊಹ್ಲಿಯೇ ಕಾರಣ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು ಮಾನ ಹರಾಜು:

ತಂಡದ ಕೆಟ್ಟ ನಿರ್ಧಾರದಿಂದ ಬೆಂಗಳೂರಿನ ಮಾನ ಹರಾಜಾಗುತ್ತಿದೆ. ಹಾಗಾಗಿ ರಾಯಲ್ ಚಾಲೆಂಜರ್ಸ್ ತಂಡದ ಹೆಸರಿನಿಂದ ಬೆಂಗಳೂರು ಹೆಸರು ತೆಗೆದು ಹಾಕಿ ಬೆಂಗಳೂರು ಮಾನ ಉಳಿಸುವಂತೆ  ಪತ್ರದಲ್ಲಿ ಮನವಿ ಮಾಡಲಾಗಿದೆ.

ರಾಯಲ್ ಚಾಲೆಂಜರ್ಸ್ ತಂಡಕ್ಕೆ ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಪ್ರತಿ ಪಂದ್ಯದಲ್ಲೂ ಅಭಿಮಾನಿಗಳು ತಂಡವನ್ನು ಬೆಂಬಲಿಸಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರು ಇದ್ದರೂ ಕೂಡ ತಂಡದ ಆಡಳಿತ ಮಂಡಳಿ ಆಟಗಾರರನ್ನು ಕಡೆಗಣಿಸಿದೆ. ಅದಾಗ್ಯೂ ತಂಡದಲ್ಲಿ ಉತ್ತಮ ಆಟಗಾರರು ಇದ್ದರು ಕೂಡ ಉತ್ತಮ ಪ್ರದರ್ಶನ ನೀಡಲು ವಿಫಲವಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕರ್ನಾಟಕಕ್ಕೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಿಆರ್ ವಿಶ್ವನಾಥ್, ಬ್ರಿಜೇಶ್ ಪಟೇಲ್, ರೋಜರ್ ಬಿನ್ನಿ, ವೆಂಕಟೇಶ್ ಪ್ರಸಾದ್, ಕಿರ್ಮಾನಿ, ಜಾವಗಲ್ ಶ್ರೀನಾಥ್ ಸೇರಿದಂತೆ ಹಲವು ಹಿರಿಯ ಆಟಗಾರರು ತಂದಿದ್ದ ಕೀರ್ತಿಯನ್ನು ಮಣ್ಣುಪಾಲು ಮಾಡುತ್ತಿರುವ ತಂಡದ ಹೆಸರಿನಿಂದ ಬೆಂಗಳೂರು ಹೆಸರನ್ನು ತೆಗೆದುಹಾಕಿ ಎಂದು ಮನವಿ ಮಾಡಿದ್ದಾರೆ.