ಐಸಿಐಸಿಐ ಬ್ಯಾಂಕ್​ಗೆ ₹12 ಕೋಟಿ ದಂಡ ವಿಧಿಸಿದ ಆರ್​ಬಿಐ : ತನ್ನದೇ ನಿರ್ದೇಶಕರ ಕಂಪನಿಗಳಿಗೆ ಸಾಲ

ನವದೆಹಲಿ: ಐಸಿಐಸಿಐ ಬ್ಯಾಂಕ್ ಲಿಮಿಟೆಡ್​ನಲ್ಲಿ ನಿರ್ದೇಶಕರಾಗಿರುವ ಇಬ್ಬರು ವ್ಯಕ್ತಿಗಳು ತಾವೇ ನಿರ್ದೇಶಕರಾಗಿರುವ ಮತ್ತೊಂದು ಕಂಪನಿಗಳಿಗೆ ಸಾಲ ಮಂಜೂರು ಮಾಡಿದ್ದಕ್ಕಾಗಿ ಅಥವಾ ಸಾಲ ಮಂಜೂರಿಗೆ ಯತ್ನಿಸಿದ್ದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಐಸಿಐಸಿಐ ಬ್ಯಾಂಕ್​ಗೆ 12.19 ಕೋಟಿ ರೂ.ಗಳ ದಂಡ ವಿಧಿಸಿದೆ.ಸಾಲ ನೀಡುವಿಕೆಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆರ್​ಬಿಐ ಐಸಿಐಸಿಐ ಬ್ಯಾಂಕ್​ಗೆ 12 ಕೋಟಿ ರೂ. ದಂಡ ವಿಧಿಸಿದೆ.

ಬ್ಯಾಂಕಿಂಗ್ ನಿಯಂತ್ರಣ (ಬಿಆರ್) ಕಾಯ್ದೆಯ ನಿಬಂಧನೆಗಳು ಮತ್ತು ಬ್ಯಾಂಕಿಂಗ್ ನಿಯಂತ್ರಕ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಕಾರಣ ಐಸಿಐಸಿಐ ಬ್ಯಾಂಕ್​ಗೆ ಏಕೆ ದಂಡ ವಿಧಿಸಬಾರದು ಎಂದು ಆರ್​ಬಿಐ ನೋಟಿಸ್ ನೀಡಿದೆ. ನೋಟಿಸ್​ಗೆ ಬ್ಯಾಂಕ್​ ನೀಡಿದ ಉತ್ತರ, ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮಾಡಿದ ಮೌಖಿಕ ಹೇಳಿಕೆಗಳು ಮತ್ತು ಹೆಚ್ಚುವರಿ ಹೇಳಿಕೆಗಳನ್ನು ಪರಿಗಣಿಸಿದ ನಂತರ, ಆರ್​ಬಿಐ ಬಿಆರ್ ಕಾಯ್ದೆಯ ನಿಬಂಧನೆಗಳು ಮತ್ತು ಆರ್​ಬಿಐನ ನಿರ್ದೇಶನಗಳನ್ನು ಬ್ಯಾಂಕ್ ಅನುಸರಿಸುತ್ತಿಲ್ಲ ಎಂಬ ಆರೋಪ ದೃಢಪಟ್ಟಿದೆ ಮತ್ತು ಬ್ಯಾಂಕಿನ ಮೇಲೆ ವಿತ್ತೀಯ ದಂಡ ವಿಧಿಸುವ ಅಗತ್ಯವಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಅದು ಹೇಳಿದೆ.

ಆರ್​ಬಿಐ ಪ್ರಕಾರ, ಐಸಿಐಸಿಐ ಬ್ಯಾಂಕ್ ವಿರುದ್ಧದ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ ಮತ್ತು ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವವನ್ನು ಪ್ರಶ್ನಿಸುವ ಉದ್ದೇಶ ಹೊಂದಿಲ್ಲ.

ಆರ್​ಬಿಐ ಐಸಿಐಸಿಐ ಬ್ಯಾಂಕ್​ಗೆ ವಿತ್ತೀಯ ದಂಡ ವಿಧಿಸುತ್ತಿರುವುದು ಇದೇ ಮೊದಲಲ್ಲ. ಮೇ 2021 ರಲ್ಲಿ ಆರ್​ಬಿಐ ತನ್ನ ಹೂಡಿಕೆ ಪೋರ್ಟ್​ಫೋಲಿಯೊದ ಕಾರ್ಯಾಚರಣೆಯಲ್ಲಿ ವಿವೇಚನಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಐಸಿಐ ಬ್ಯಾಂಕ್​ಗೆ 3 ಕೋಟಿ ರೂ.ಗಳ ದಂಡ ವಿಧಿಸಿತ್ತು. ಸೆಕ್ಯುರಿಟಿಗಳನ್ನು ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ವರ್ಗಾಯಿಸುವ ವಿಷಯದಲ್ಲಿ ನಿಯಮಗಳ ಉಲ್ಲಂಘನೆ ನಡೆದಿದೆ ಎಂದು ಆಗ ಆರ್​ಬಿಐ ಹೇಳಿತ್ತು.ಮಾರ್ಚ್ 31, 2020 ಮತ್ತು ಮಾರ್ಚ್ 31, 2021 ಅವಧಿಯಲ್ಲಿನ ಬ್ಯಾಂಕಿನ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕಿನ ಮೇಲ್ವಿಚಾರಣೆ ಮೌಲ್ಯಮಾಪನಕ್ಕಾಗಿ (ಐಎಸ್‌ಇ) ಆರ್​ಬಿಐ ಶಾಸನಬದ್ಧ ತಪಾಸಣೆ ನಡೆಸಿತ್ತು. ಐಎಸ್‌ಇ 2020 ಮತ್ತು ಐಎಸ್‌ಇ 2021 ರ ಬಗ್ಗೆ ಅಪಾಯ ಮೌಲ್ಯಮಾಪನ ವರದಿಗಳು (ಆರ್​ಎಆರ್) ಮತ್ತು ಪರಿಶೀಲನಾ ವರದಿಗಳು (ಐಆರ್) ಮತ್ತು ಆ ನಿಟ್ಟಿನಲ್ಲಿ ಎಲ್ಲಾ ಸಂಬಂಧಿತ ವ್ಯವಹಾರಗಳನ್ನು ಪರಿಶೀಲಿಸಿದಾಗ, ಬ್ಯಾಂಕ್ ತನ್ನ ಇಬ್ಬರು ನಿರ್ದೇಶಕರು ನಿರ್ದೇಶಕರಾಗಿದ್ದ ಕಂಪನಿಗಳಿಗೆ ಸಾಲ ಮಂಜೂರು ಮಾಡಿದೆ ಅಥವಾ ಸಾಲ ನೀಡುವ ಬದ್ಧತೆ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.