ಗಡಿಯಾಚೆಗಿನ ವಹಿವಾಟುಗಳಿಗೆ ಆ ದೇಶದ ಕರೆನ್ಸಿಯ ಬಳಕೆ ಉತ್ತೇಜಿಸಲು ಮತ್ತು ಪಾವತಿ, ಸಂದೇಶ ವ್ಯವಸ್ಥೆಯನ್ನು ಪರಸ್ಪರ ಲಿಂಕ್ ಮಾಡುವ 2 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.ದುಬೈ, ಯುಎಇ: ಜಾಗತೀಕರಣದ ಪ್ರಭಾವದಿಂದಾಗಿ ಕರೆನ್ಸಿಗಳು ಆಯಾ ದೇಶಗಳಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಬಹುಮುಖ್ಯವಾಗಿದೆ.ಹೀಗಾಗಿ ಗಡಿಯಾಚೆ ಸ್ಥಳೀಯ ಕರೆನ್ಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್(CBUAE) ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ.
ಭಾರತ ಮತ್ತು ಯುಎಇ ಮಧ್ಯೆ ಸ್ಥಳೀಯ ಕರೆನ್ಸಿಗಳ ಮೂಲಕ ವಹಿವಾಟಿಗೆ ಒಪ್ಪಂದ ಮಾಡಿಕೊಂಡಿವೆ. ಯುಪಿಐ ಬಳಕೆಗೆ ಅಂಕಿತ ಹಾಕಿದ ಬೆನ್ನಲ್ಲೇ ಮತ್ತೊಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಲೋಕಲ್ ಕರೆನ್ಸಿ ಸೆಟಲ್ಮೆಂಟ್ ಸಿಸ್ಟಮ್ನಿಂದಾಗಿ ಇನ್ನು ಮುಂದೆ ರಫ್ತುದಾರರು ಹಾಗೂ ಆಮದುದಾರರು ತಮ್ಮ ಸ್ಥಳೀಯ ಕರೆನ್ಸಿಗಳ ಮೂಲಕವೇ ವಹಿವಾಟು ನಡೆಸಲು ಅನುವು ಮಾಡಿಕೊಡಲಿದೆ. ಇದು ರುಪೀ ಮತ್ತು ಎಇಡಿ ವಿದೇಶಿ ವಿನಿಮಯ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸುತ್ತದೆ ಎಂದು ಆರ್ಬಿಐ ತಿಳಿಸಿದೆ.
ಲೋಕಲ್ ಕರೆನ್ಸಿ ಸೆಟಲ್ಮೆಂಟ್ ಸಿಸ್ಟಮ್ (LCSS) ಅನ್ನು ಜಾರಿಗೆ ತರುವ ಗುರಿಯೊಂದಿಗೆ ಆರ್ಬಿಐ ಮತ್ತು ಸಿಬಿಯುಎಇ ಗವರ್ನರ್ಗಳು ಎರಡು ಏಷ್ಯಾದ ದೇಶಗಳ ನಡುವಿನ ವಹಿವಾಟಿಗಾಗಿ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಅನುಮೋದಿಸಿದರು. ಇದರಲ್ಲಿ ಎಲ್ಲ ಚಾಲ್ತಿ ಖಾತೆ ವಹಿವಾಟುಗಳು ಮತ್ತು ಅನುಮತಿಸಲಾದ ಬಂಡವಾಳ ಖಾತೆ ವಹಿವಾಟುಗಳನ್ನೂ ಇದು ಒಳಗೊಂಡಿರುತ್ತದೆ.
ಯುಪಿಐ ಅಥವಾ ಐಪಿಪಿಗಳ ಮೂಲಕ ಪಾವತಿಯಾದ ವಹಿವಾಟಿನ ಮಾಹಿತಿಯ ಸಂದೇಶವನ್ನು ಪರಸ್ಪರ ಹಂಚಿಕೊಳ್ಳಲೂ ಆರ್ಬಿಐ ಮತ್ತು ಸಿಬಿಯುಎಇ ಒಪ್ಪಿಕೊಂಡಿವೆ. ಇದು ಉಭಯ ದೇಶಗಳ ನಡುವಿನ ಹಣಕಾಸು ಸಂದೇಶ ರವಾನೆಯನ್ನು ಸರಾಗಗೊಳಿಸುವ ಗುರಿಯನ್ನು ಹೊಂದಿದೆ. ಅಂದರೆ ಭಾರತದ ರಚನಾತ್ಮಕ ಹಣಕಾಸು ಸಂದೇಶ ವ್ಯವಸ್ಥೆ (SFMS) ಯುಎಇಯಲ್ಲಿ ಸಂದೇಶ ಕಳುಹಿಸುವ ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಲಾಗುತ್ತದೆ.
ಪ್ರಧಾನಿ ಮೋದಿ ಭೇಟಿ ಫಲ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಈ ಒಪ್ಪಂದ ನಡೆದಿದೆ. ಇದು ಉಭಯ ರಾಷ್ಟ್ರಗಳ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ಬಣ್ಣಿಸಲಾಗಿದೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಪ್ರಧಾನಿ ಮೋದಿ ಅವರು, ಉಭಯ ದೇಶಗಳು ತಮ್ಮ ಕರೆನ್ಸಿಗಳ ಮೂಲಕ ವಹಿವಾಟು ನಡೆಸಲು ಒಪ್ಪಂದ ಮಾಡಿಕೊಂಡಿವೆ ಎಂದು ಘೋಷಿಸಿದರು.
ಯುಪಿಐ ವಹಿವಾಟಿಗೂ ಓಕೆ: ಸ್ಥಳೀಯ ಕರೆನ್ಸಿಗಳ ಬಳಕೆಯ ಜೊತೆಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಯುಎಇ ಸೆಂಟ್ರಲ್ ಬ್ಯಾಂಕ್ ಆಫ್ ಗವರ್ನರ್ ಎಚ್.ಇ.ಖಲೀದ್ ಮೊಹಮದ್ ಬಾಲಾಮಾ ಅವರು ಭಾರತದ ತ್ವರಿತ ಪಾವತಿ ವ್ಯವಸ್ಥೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮತ್ತು ಯುಎಇಯ ತ್ವರಿತ ಪಾವತಿ ಪ್ಲಾಟ್ಫಾರ್ಮ್ ಆದ ಐಪಿಪಿಯೊಂದಿಗೆ ಲಿಂಕ್ ಆಗಲೂ ಸಹ ಒಪ್ಪಿಗೆ ಸೂಚಿಸಿದರು.
ಯುಪಿಐ ಮತ್ತು ಐಪಿಪಿ ಲಿಂಕ್ ಮಾಡುವುದರಿಂದ ಉಭಯ ರಾಷ್ಟ್ರಗಳ ಮಧ್ಯೆ ವಹಿವಾಟು ಮತ್ತು ಹಣ ವರ್ಗಾವಣೆ ವ್ಯವಸ್ಥೆ ಮತ್ತಷ್ಟು ಸಲೀಸಲಾಗಿದೆ. ಗಡಿಯಾಚೆಯ ವ್ಯವಹಾರಗಳಿಗೆ ಈ ವರ್ಗಾವಣೆಯು ಅನುವು ಮಾಡಿಕೊಡಲಿದೆ. ಇದರ ಜೊತೆಗೆ ದೇಶೀಯ ಕಾರ್ಡ್ಗಳ ಪರಸ್ಪರ ಸ್ವೀಕಾರ ಮತ್ತು ಈ ಕಾರ್ಡ್ ವಹಿವಾಟುಗಳ ಪ್ರಕ್ರಿಯೆಗೆ ಅನುವು ಮಾಡಿಕೊಡಲು ರುಪೇ ಸ್ವಿಚ್ ಮತ್ತು ಯುಎಇ ಎಸ್ವಿಚ್ಗೆ ಸಂಬಂಧಿಸಿದ ಕಾರ್ಡ್ಗಳನ್ನು ಲಿಂಕ್ ಮಾಡಲು ಕೂಡ ಇದೇ ವೇಳೆ ಒಪ್ಪಂದ ಮಾಡಿಕೊಳ್ಳಲಾಯಿತು.