ಭೂಗತ ಪಾತಕಿ ರವಿ ಪೂಜಾರಿ ಎರೆಸ್ಟ್! ರಾಜಕಾರಣಿ, ಉದ್ಯಮಿಗಳ ನಿದ್ದೆಗೆಡಿಸಿದ ಪಾತಕಿ ಕೊನೆಗೂ ಅಂದರ್

ಉಡುಪಿ: ಕಳೆದ 15 ವರ್ಷದಿಂದ ವಿದೇಶದಲ್ಲಿ ತಲೆಮಾರಿಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಇಂದು ಸಂಜೆ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಮಲ್ಪೆಯ ನಿವಾಸಿ ಪಾತಕಿ ರವಿ ಪೂಜಾರಿ ಕಳೆದ 15 ವರ್ಷದಿಂದ ದುಬೈ, ಆಸ್ಟ್ರೇಲಿಯಾ, ಆಫ್ರಿಕಾ ಸೇರಿದಂತೆ ವಿದೇಶಗಳಲ್ಲಿ ತಲೆ ಮಾರಿಸಿಕೊಂಡಿದ್ದ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ವಿದೇಶದಲ್ಲಿಯೇ ಇದ್ದುಕೊಂಡು ಉದ್ಯಮಿ, ರಾಜಕಾರಣಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಭೂಗತವಾಗಿದ್ದುಕೊಂಡೆ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಪೂಜಾರಿಯ ವಿರುದ್ಧ ಕೇಂದ್ರ ಸರ್ಕಾರ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಈಗಾಗಲೇ ಅಲ್ಲಿಯ ರಾಯಭಾರಿ ಕಚೇರಿಯ ಅಧಿಕಾರಿಗಳನ್ನು ಸಂಪರ್ಕ ಸಾಧಿಸುವ ಮೂಲಕ ಪಾತಕಿ ರವಿಯನ್ನು ಭಾರತಕ್ಕೆ ಕರೆತರುವ ಬಗ್ಗೆ ಭಾರತದ ತನಿಖಾ ಸಂಸ್ಥೆ ಮಾತುಕತೆ ನಡೆಸಿದೆ. ಕಾನೂನು ಪ್ರಕ್ರಿಯೆಗಳು ಆರಂಭಗೊಂಡಿವೆ. ಶೀಘ್ರದಲ್ಲಿಯೇ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.