ಭೂಗತ ಪಾತಕಿ ರವಿ ಪೂಜಾರಿ ತಾಯಿಯ ಅಂತ್ಯಕ್ರಿಯೆ ಇಂದು

ಸ್ವಗ್ರಾಮ ಮಲ್ಪೆಗೆ ತೆರಳಲು ನ್ಯಾಯಾಲಯದಿಂದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಆಗಮಿಸಿದ ರವಿ ಪೂಜಾರಿ

ಉಡುಪಿ: ಭೂಗತ ಲೋಕದ ಕುಖ್ಯಾತ ಪಾತಕಿ ರವಿ ಪೂಜಾರಿ ಅವರ ತಾಯಿ ಸುಶೀಲಾ ಪೂಜಾರ್ತಿ (86) ಅವರು ಗುರುವಾರ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಮಲ್ಪೆ ಸಮೀಪದ ನೆರ್ಗಿಯಲ್ಲಿ ನಡೆಯಲಿದೆ.

ಸುಶೀಲಾ ಪೂಜಾರ್ತಿ ಅವರು ಐವರು ಮಕ್ಕಳನ್ನು ಅಗಲಿದ್ದಾರೆ. ಇಬ್ಬರು ಪುತ್ರಿಯರು ಹಾಗೂ ರವಿ ಪೂಜಾರಿ ಸೇರಿದಂತೆ ಮೂವರು ಪುತ್ರರನ್ನು ಹೊಂದಿದ್ದರು.

ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರವಿ ಪೂಜಾರಿ ಅವರಿಗೆ ತಮ್ಮ ಸ್ವಗ್ರಾಮಕ್ಕೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ನ್ಯಾಯಾಲಯದ ಆದೇಶದಂತೆ ಶುಕ್ರವಾರ ಮಧ್ಯಾಹ್ನ ಪೊಲೀಸ್ ಎಸ್ಕಾರ್ಟ್ ಭದ್ರತೆಯಲ್ಲಿ ಅವರನ್ನು ಉಡುಪಿಗೆ ಕರೆತರಲಾಗಿದೆ.

ಶನಿವಾರ ಬೆಳಿಗ್ಗೆ 11 ಗಂಟೆಗೆ ಮಲ್ಪೆಯ ನೆರ್ಗಿಯಲ್ಲಿ ನಡೆಯಲಿರುವ ತಾಯಿಯ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ರವಿ ಪೂಜಾರಿ ಪಾಲ್ಗೊಳ್ಳಲಿದ್ದಾರೆ. ಅಂತ್ಯಕ್ರಿಯೆ ಪೂರ್ಣಗೊಂಡ ಬಳಿಕ ಅವರನ್ನು ಮತ್ತೆ ಕರೆದೊಯ್ಯುವಂತೆ ನ್ಯಾಯಾಲಯ ಸೂಚಿಸಿದೆ.