(ಉಡುಪಿ XPRESS-ನಮ್ಮೂರ ಸ್ಪೆಷಲ್ ವ್ಯಕ್ತಿ)
ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಸುಮಾರು ಮಂದಿ ವೇಷ ಧರಿಸಿ ಜನರನ್ನು ರಂಜಿಸುವುದು ಸರ್ವೇ ಸಾಮಾನ್ಯ. ಆದರೆ ಇದು ಕೇವಲ ಸಂಭ್ರಮಕ್ಕೆ ಸೀಮಿತವಾಗದೇ ಮಾನವೀಯ ನೆಲೆಯಲ್ಲೂ ಆಚರಿಸಬಹುದು ಎಂದು ತೋರಿಸಿಕೊಟ್ಟವರು ಮಾತ್ರ ರವಿ ಕಟಪಾಡಿ ಅನ್ನೋ ಹೆಮ್ಮೆಯ ಕಲಾವಿದ. ರವಿ ಕಟಪಾಡಿ ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯವರು. ಕಟ್ಟಡ ಕಾರ್ಮಿಕರಾಗಿರುವ ಇವರು, ಬಡ ಕುಟುಂಬದಲ್ಲೇ ಬೆಳೆದರು. ಮಾನವೀಯತೆಗೆ ಮಿಡಿಯುವ ಈ ಕಲಾವಿದನ ಇನ್ನೊಂದು ಮುಖದ ಪರಿಚಯ ಇಲ್ಲಿದೆ.
ತಾಯ್ತನಕ್ಕೆ ಮಿಡಿದರು:ವೇಷ ಕಟ್ಟಿದರು:
ಐದಾರು ವರ್ಷಗಳ ಹಿಂದೆ ತಾಯಿಯೊಬ್ಬಳ ಬಾಣಂತನದ ಸಂದರ್ಭದಲ್ಲಿ ಮಗುವನ್ನು ಹೊರಗೆ ಎಳೆಯುವಾಗ ವೈದ್ಯರ ನಿರ್ಲಕ್ಷ್ಯದಿಂದಾಗಿ ಎಳೆಗೂಸಿನ ಕೈಗೆ ತೀವ್ರವಾಗಿ ಏಟಾಯಿತು. ಆ ಮಗುವಿನ ಚಿಕಿತ್ಸೆಗೆ ಲಕ್ಷ ಹಣ ಬೇಕಾಗಿತ್ತು, ಆದರೆ ಆ ಬಡ ತಾಯಿಯ ಬಳಿ ಅಷ್ಟು ಹಣ ಇರಲ್ಲಿಲ್ಲ. ಇದನ್ನು ಕಂಡ ರವಿಯವರಿಗೆ ಧನ ಸಹಾಯ ಮಾಡಬೇಕನಿಸಿತು. ಆದರೆ ಕೂಲಿ ಕಾರ್ಮಿಕರಾಗಿರುವ ಇವರ ಬಳಿ ಅಷ್ಟೊಂದು ಹಣ ಇರಲಿಲ್ಲ. ಆಗ ಇವರಿಗೆ ಹೊಳೆದ ಉಪಾಯ ಪರಕಾಯ ಪ್ರವೇಶ ಮಾಡಿ ದೇಣಿಗೆ ಸಂಗ್ರಹಿಸುವುದು.
ಹೆಣ್ಣೊಬ್ಬಳ ಅಸಹಾಯಕತೆಯನ್ನು ತನ್ನಿಂದಾದಷ್ಟು ನಿವಾರಿಸಬೇಕು ಎನ್ನುವ ಕಾರಣಕ್ಕೆ ರವಿ ಪ್ರತಿವರ್ಷ ಕೃಷ್ಣಾಷ್ಟಮಿಯ ಎರಡು ದಿನ ಅನ್ಯಗ್ರಹ ಜೀವಿಗಳ ವೇಷವನ್ನು ಧರಿಸಿ, ಸಾರ್ವಜನಿಕರಿಗೆ ರಂಜಿಸಿ, ದೇಣಿಗೆಯನ್ನು ಪಡೆಯುತ್ತಾರೆ. ಆ ದೇಣಿಗೆಯನ್ನು ಬಡಮಕ್ಕಳ ಅನಾರೋಗ್ಯಕ್ಕೆ ನೀಡುತ್ತಿದ್ದಾರೆ. ಕಟ್ಟಡ ಕಾರ್ಮಿಕರಾಗಿದ್ದರೂ, ರವಿ ಕಟಪಾಡಿಯವರು ಕಂಡ ಮಾನವೀಯತೆ ದೊಡ್ಡದು.
ಮಕ್ಕಳಿಗೆ ನೆರವಾದರು:
ಕಳೆದ ಆರು ವರ್ಷಗಳಿಂದ ವೇಷ ಹಾಕುವ ಇವರು 35ಲಕ್ಷಕ್ಕೂ ಹೆಚ್ಚಿನ ದೇಣಿಗೆಯನ್ನು ಸಂಗ್ರಹಿಸಿ, ಹತ್ತಾರು ಮಕ್ಕಳಿಗೆ ದಾನವಾಗಿ ನೀಡುತ್ತಿರುವುದು, ರವಿಯವರ ಮಾನವೀಯತೆಯನ್ನು ಎತ್ತಿ ತೋರಿಸುತ್ತದೆ.
ಎರಡು ದಿನ ವೇಷ ಹಾಕಿಕೊಂಡು ನಿದ್ರಿಸದೇ, ಅನ್ನಾಹಾರ ಸೇವಿಸದೇ ಕೇವಲ ನೀರು ಕುಡಿದುಕೊಂಡು ಬದುಕೋದು, ವೇಷ ತೆಗೆದ ನಂತರ ಮೈಗೆ ಸುಟ್ಟ ಗಾಯಗಳಾದರೂ, ಇವೆಲ್ಲವೂ ಮಕ್ಕಳ ಭೀಕರ ಅನಾರೋಗ್ಯದ ಮುಂದೆ ರವಿಯವರಿಗೆ ಕ್ಷುಲ್ಲಕವಾಗಿ ಕಾಣುತ್ತದೆಯಾದ್ದರಿಂದ ವೇಷ ಹಾಕಿ ಪಡುವ ಪಾಡು ಇವರಿಗೆ ದೊಡ್ಡದೆನ್ನಿಸದು.
ಇವರು ಪ್ರತಿ ಬಾರಿಯೂ ನಾನಾ ವೇಷಗಳಲ್ಲಿ ಕಾಣಿಸಿಕೊಳ್ಳಲು ದಿನೇಶ್ ಮಟ್ಟು ಅವರ ಶ್ರಮ ಇದೆ. ರಾತ್ರಿಯಿಡೀ ಮೇಕಪ್ ಮಾಡುವುದರಿಂದ ರವಿಯವರು ಆಕರ್ಷಕವಾಗಿ ಕಾಣಲು ಸಾಧ್ಯ.
ಹೀಗೆ ರವಿಯವರ ಅಪ್ರತಿಮ ಮಾನವೀಯತೆಗೆ ಮಣಿದ ಅನೇಕ ಗೆಳೆಯರು ‘ರವಿಫ್ರೆಂಡ್ಸ್, ಕಟಪಾಡಿ’ ಎಂಬ ತಂಡ ಕಟ್ಟಿಕೊಂಡು, ಇವರ ಜೊತೆ ಕೈಜೋಡಿಸಿದ್ದಾರೆ. ಹಾಗೆಯೇ ‘ಮಿಲಾಪ್’ ಎಂಬ ಸರ್ಕಾರೇತರ ಸೇವಾ ಸಂಸ್ಥೆ ಇವರ ಬಗೆಗಿನ 2 ನಿಮಿಷಗಳ ‘ಎ ಕೈಂಡ್ ಹಾರ್ಟೆಡ್ ಮೊನೊಸ್ಟಾರ್’ ಕಿರುಚಿತ್ರ ಮಾಡಿ, ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಾಗ ಇವರ ಹೃದಯವೈಶಾಲ್ಯತೆಯನ್ನು ಕಂಡು ಅನೇಕ ಅನಿವಾಸಿ ಭಾರತೀಯರಿಂದ 16,80,೦೦೦ರೂ ಸಂಗ್ರಹವಾಯಿತು. ಸಂಗ್ರಹವಾದ ಸಂಪೂರ್ಣ ಹಣವನ್ನು ಜಿಲ್ಲೆಯ ಅನಾರೋಗ್ಯ ಪೀಡಿತ ಬಡ ಮಕ್ಕಳಿಗೆ ಅನೇಕ ಹಿರಿಯರ ಸಮ್ಮುಖದಲ್ಲಿ ನೀಡುತ್ತಿದ್ದಾರೆ.
ಪತ್ರೀ ವರ್ಷವೂ ಲಕ್ಷಾಂತರ ದೇಣಿಗೆ ಸಂಗ್ರಹಿಸಿ ನೂರಾರು ಮಕ್ಕಳ ಬದುಕಿಗೆ ಬೆಳಕಾಗುತ್ತಿದ್ದಾರೆ ರವಿ ಕಟಪಾಡಿ. ೩-೪ ಬಡ ಮಕ್ಕಳ ಅನಾರೋಗ್ಯದ ಖರ್ಚನ್ನು ಭರಿಸಲಿದ್ದಾರೆ.
ಇವರ ಸೇವೆ ಗುರುತಿಸಿ ೨೦೧೭ನೇ ನವೆಂಬರ್‌ನಲ್ಲಿ ಇವರಿಗೆ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಸಾಧಕ ರತ್ನ’, ‘ಸೇವಾ ಮಾಣಿಕ್ಯ’, ‘ಯುವ ಸೇವಾ ಪ್ರಶಸ್ತಿ’, ‘ನಾಡ ಗೌರವ’ ಹೀಗೆ ಅನೇಕ ಪ್ರಶಸ್ತಿಗಳು ಹಾಗೂ ಬಿರುದುಗಳು ಇವರ ಮಾನವೀಯ ಕೆಲಸವನ್ನು ನೆಚ್ಚಿ ಇವರನ್ನರಸಿ ಬಂದಿವೆ.
ಏನಂತಾರೆ ರವಿ?
ಪ್ರತಿಯೊಬ್ಬ ವ್ಯಕ್ತಿಯೂ ಅನಾವಶ್ಯಕ ಖರ್ಚನ್ನು ಮಾಡದೇ ಅದನ್ನು ಉಳಿಸಿ ಬಡವರಿಗೆ ಸಹಾಯ ಮಾಡಿದಾಗ ಸಿಗುವ ಖುಷಿ ಹಾಗೂ ಸಂತೃಪ್ತಿ ಜೀವಮಾನದಲ್ಲಿ ದೊರಕುವುದಿಲ್ಲ. ಸಮಾಜದಲ್ಲಿ ಬದುಕಲು ಹಣದ ಜೊತೆಗೆ ಮಾನವೀಯತೆಯೂ ಮುಖ್ಯ ಎನ್ನುತ್ತಾರೆ ರವಿ ಕಟಪಾಡಿ. ಒಟ್ಟಾರೆ ಮಾನವೀಯತೆಗೆ ಸ್ಪಂದಿಸುವ ಈ ಕಲಾವಿದನ ಬದುಕೂ ಹಸನಾಗಲಿ ಎನ್ನುವುದು ನಮ್ಮ ಹಾರೈಕೆ