ರೌಡಿಶೀಟರ್ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದ ವಿಚಾರಣೆ ಪೂರ್ಣ: ನಾಲ್ಕು ಮಂದಿಯ ಆರೋಪ ಸಾಬೀತು, ನಾಳೆ ಶಿಕ್ಷೆ ಪ್ರಕಟ

ಉಡುಪಿ: ಕಳೆದ ಎಂಟು ವರ್ಷಗಳ ಹಿಂದೆ ಹಿರಿಯಡಕ ಸಮೀಪದ ಅಂಜಾರು ಜೈಲಿನಲ್ಲಿ ನಡೆದ ರೌಡಿ ಶೀಟರ್ ವಿನೋದ ಶೆಟ್ಟಿಗಾರ್ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ, ಆರು ಆರೋಪಿಗಳ ಪೈಕಿ ನಾಲ್ವರನ್ನು ದೋಷಿಗಳೆಂದು ಬುಧವಾರ ಆದೇಶ ನೀಡಿದೆ.
ಬ್ರಹ್ಮಾವರ ಬೈಕಾಡಿ ನಿವಾಸಿಗಳಾದ ಮುತ್ತಪ್ಪ (36), ನಾಗರಾಜ ಬಳೆಗಾರ (33), ಶೇಖ್ ರಿಯಾಜ್ ಅಹಮ್ಮದ್ (33) ಹಾಗೂ ಗಂಗಾವತಿ ಅಗೋಳಿ ನಿವಾಸಿ ಶರಣಪ್ಪ ಅಮರಾಪುರ(33) ಆರೋಪ ಸಾಬೀತಾಗಿದ್ದು, ಕುಕ್ಕಿಕಟ್ಟೆ ಇಂದಿರನಗರ ನಿವಾಸಿ ರಾಘವೇಂದ್ರ (35) ಖುಲಾಸೆಗೊಂಡಿದ್ದಾನೆ. ಕೊಲೆ ಪ್ರಕರಣದ ಸೂತ್ರಧಾರಿ ಕುಖ್ಯಾತ ರೌಡಿ ಕುಕ್ಕಿಕಟ್ಟೆ ಇಂದಿರಾನಗರದ ನಿವಾಸಿ ಪಿಟ್ಟಿ ನಾಗೇಶ ಈಗಾಗಲೇ ಹತ್ಯೆಯಾಗಿದ್ದಾನೆ. ನಾಳೆ ನ್ಯಾಯಾಲಯ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಲಿಸಲಿದೆ.
ಜೈಲಿನಲ್ಲಿ ಸಂಚು ರೂಪಿಸಿದ್ದ ಅಪರಾಧಿಗಳು:
ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾದ ಮುತ್ತಪ್ಪ , ನಾಗರಾಜ ಬಳೆಗಾರ, ಶೇಖ್ ರಿಯಾಜ್ ಅಹಮ್ಮದ್, ಗಂಗಾವತಿ ಅಗೋಳಿ ನಿವಾಸಿ ಶರಣಪ್ಪ ಅಮರಾಪುರ 2011ರ ಜನವರಿ 14 ರಂದು ಬೆಳಗ್ಗೆ 8:15 ಸುಮಾರಿಗೆ ಜೈಲಿನ ಬ್ಯಾರಕ್‌ನ  ಆವರಣದಲ್ಲಿ ಕೂತಿದ್ದ ವಿನೋದ್ ಶೆಟ್ಟಿಗಾರ್ ಮೇಲೆ ಏಕಾಏಕಿ ದಾಳಿ ನಡೆಸಿ, ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ಈ ವೇಳೆ ತಡೆಯಲು ಪ್ರಯತ್ನಿಸಿದ  ಜೈಲಿನ ಗಾರ್ಡ್ ದಿನೇಶ್ ಆಚಾರ್ಯ ಎಂಬುವರ ಮೇಲೂ ಆರೋಪಿಗಳು ಚೂರಿ ಇರಿದು ಗಾಯಗೊಳಿಸಿದ್ದರು. ವಿನೋದ್ ಶೆಟ್ಟಿಗಾರ್ ಪಿಟ್ಟಿ ನಾಗೇಶ್ ನ ಕೊಲೆ ಯತ್ನ ಪ್ರಕರಣದ ವಿಚಾರಣಾಧೀನ ಕೈದಿಯಾಗಿದ್ದನು.
ಹಳೆ ವೈಷ್ಯಮವೇ ಹತ್ಯೆಗೆ ಕಾರಣ:
ವಿನೋದ್ ಶೆಟ್ಟಿಗಾರ್ ತನ್ನ ಸಹಚರರ ಜತೆ ಸೇರಿಕೊಂಡು ಪಿಟ್ಟಿ ನಾಗೇಶ್‌ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ನಂತರ ಜೈಲಿನಲ್ಲಿ ಇದ್ದುಕೊಂಡೆ ಪಿಟ್ಟಿಗೆ ಕೊಲೆ ಬೆದರಿಕೆ ಹಾಕಿದ್ದನು. ಈ ಹಿನ್ನೆಲೆಯಲ್ಲಿ ಪಿಟ್ಟಿ ನಾಗೇಶ್ ಸಂಚು ಹೂಡಿ ಶೆಟ್ಟಿಗಾರ್ ನನ್ನು ಕೊಲೆ ಮಾಡಿಸಿದ್ದನು. ಇದಕ್ಕೆ ಪ್ರತೀಕಾರವಾಗಿ ವಿನೋದ್ ಶೆಟ್ಟಿಗಾರ್ ನ ಸಹಚರರು ನಾಲ್ಕು ವರ್ಷಗಳ ಹಿಂದೆ ಪಿಟ್ಟಿಯನ್ನು ಉದ್ಯಾವರ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು.
ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ ತನಿಖಾಧಿಕಾರಿಯಾಗಿ ದೋಷರೋಪವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಒಟ್ಟು 48 ಸಾಕ್ಷಿದಾರರ ಪೈಕಿ 35 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ಚಂದ್ರಶೇಖರ ಎಂ.ಜೋಷಿ ಅವರು ನಾಲ್ವರು ದೋಷಿಗಳೆಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಿದ್ದರು.