ಬೆಂಗಳೂರು: ಆಂಧ್ರಪ್ರದೇಶದ ಮಾದರಿಯಲ್ಲಿ ಪಡಿತರ ಚೀಟಿದಾರರಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಯನ್ನು ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ. ನವೆಂಬರ್ 1ರಂದು ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಪ್ರತಿ ನ್ಯಾಯಬೆಲೆ ಅಂಗಡಿ ಜತೆಗೆ ಒಂದು ವಾಹನವನ್ನು ಜೋಡಣೆ ಮಾಡುವ ಪ್ರಸ್ತಾವವಿದೆ. ಇದಕ್ಕಾಗಿ 700 ವಾಹನಗಳ ಅಗತ್ಯವಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಆಹಾರ ಸಚಿವ ಉಮೇಶ ಕತ್ತಿ ನಡೆಸಿದ ಸಭೆಯಲ್ಲಿ ಅಂದಾಜಿಸಲಾಗಿದೆ.
ಈಗ ಇರುವ ಪ್ರಸ್ತಾವದ ಪ್ರಕಾರ, ಮನೆ ಬಾಗಿಲಿಗೆ ಪಡಿತರ ಸಾಗಿಸುವುದಕ್ಕೆ ಪ್ರತಿ ನ್ಯಾಯಬೆಲೆ ಅಂಗಡಿಗೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದು. ಅವರು ಖರೀದಿಸುವ ವಾಹನಕ್ಕೆ ಸರಕು ಮತ್ತು ಸೇವಾ ತೆರಿಗೆ, ಸಹಾಯಧನ ಸೇರಿದಂತೆ ಶೇಕಡ 30ರಷ್ಟು ನೆರವನ್ನು ಇಲಾಖೆಯಿಂದ ನೀಡಲಾಗುವುದು. ಶೇ 4ರ ಬಡ್ಡಿ ದರದಲ್ಲಿ ಆರು ವರ್ಷಗಳ ಅವಧಿಗೆ ಸಾಲವನ್ನೂ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಆಂಧ್ರಪ್ರದೇಶದಲ್ಲಿ ಪಡಿತರ ಸಾಗಿಸುವ ವಾಹನದ ಮಾಲೀಕರಿಗೆ ಪ್ರತಿ ಕೆ.ಜಿ.ಗೆ ₹ 1ರಷ್ಟು ಸಾಗಣೆ ವೆಚ್ಚ ನೀಡಲಾಗುತ್ತದೆ. ಅದೇ ದರವನ್ನು ರಾಜ್ಯದಲ್ಲೂ ನಿಗದಿಪಡಿಸುವ ಪ್ರಸ್ತಾವವಿದೆ.