ಅಮಾಸೆಬೈಲು ಯುವತಿ ಅತ್ಯಾಚಾರ ಪ್ರಕರಣ: ಆರೋಪಿಗೆ ಏಳು ವರ್ಷ ಶಿಕ್ಷೆ

ಕುಂದಾಪುರ: ಕಳೆದ 4 ವರ್ಷಗಳ ಹಿಂದೆ ಅಮಾಸೆಬೈಲು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಂಗಡಿ ಎಂಬಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ಕುಂದಾಪುರದ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಹೊಸಂಗಡಿಯ ನಿವಾಸಿ ಶಂಕರ್ ನಾಯ್ಕ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 2016ರ ಸೆ.18ರಂದು ಹೊಸಂಗಡಿಯ 19 ವರ್ಷದ ಯುವತಿಯ ಮನೆಯೊಳಗೆ ನುಗ್ಗಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಅಂದಿನ ಕುಂದಾಪುರದ ಸಿಪಿಐ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಪ್ರಕರಣದ ಸಂಬಂಧಿಸಿ ಸಾಕ್ಷಿಗಳ ಹೇಳಿಕೆ, ವೈದ್ಯಕೀಯ ವರದಿಗಳು ಮತ್ತು ಸಂತ್ರಸ್ತೆ ನೀಡಿದ ಹೇಳಿಕೆಗಳನ್ನು ಆಧರಿಸಿ ಆರೋಪಿ ಶಂಕರ್ ನಾಯ್ಕ್ ಎಂಬಾತನಿಗೆ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಅವರು ಈ ಮೇಲಿನಂತೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಸಂತ್ರಸ್ತೆಯ ಪರ ಉಡುಪಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು.