ರಂಗಭೂಮಿ‌ ನೈಜತೆಯ ಪ್ರತಿಬಿಂಬ: ಮಂಜಮ್ಮ ಜೋಗತಿ

ಉಡುಪಿ: ರಂಗಭೂಮಿ ನೈಜತೆಯ ಪ್ರತಿಬಿಂಬ. ಮನಸ್ಸನ್ನು ವೃದ್ಧಿಸುವ, ಮಾತನ್ನಾಡುವ ಶಕ್ತಿ ಕಲೆಯಿಂದ ಪ್ರಾಪ್ತಿಯಾಗುತ್ತದೆ. ಹಾಗಾಗಿ ಕಲೆಯಿಲ್ಲದೆ ಜೀವನವೂ ಇಲ್ಲ ಎಂದು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
ಸುಮನಸಾ ಕೊಡವೂರು ಸಂಸ್ಥೆಯು ಕನ್ನಡ ಸಂಸ್ಕೃತಿ ಇಲಾಖೆ, ಸಂಸ್ಕೃತಿ ನಿರ್ದೇಶನಾಲಯ, ನಗರಸಭೆ ಹಾಗೂ ಪೇಜಾವರ ಮಠದ ಸಹಕಾರದೊಂದಿಗೆ ಆಯೋಜಿಸಿದ್ದ ರಂಗಹಬ್ಬ–8 ನಾಟಕೋತ್ಸವದ ಮೂರನೆ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಭೂಮಿ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಅದರಲ್ಲಿ ಕೆಲವರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಭಕ್ತಿ, ಶ್ರದ್ಧೆ, ಪ್ರೀತಿಯಿಂದ ಮಾಡುವ ಕರ್ತವ್ಯಕ್ಕೆ ದೇವರ ಅನುಗ್ರಹ ಇರುತ್ತದೆ. ಆಧುನಿಕ ಶೈಲಿಗೆ ಮಾರುಹೋಗದೆ, ಪುಸ್ತಕ, ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಾಳ್ಮೆ ಮತ್ತು ವಿಶ್ವಾಸವನ್ನು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಡಗಬೆಟ್ಟು ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜಯಕರ್‌ ಶೆಟ್ಟಿ ಇಂದ್ರಾಳಿ ಮಾತನಾಡಿ, ಜನಸಾಮಾನ್ಯರ ಅಭಿರುಚಿಗೆ ತಕ್ಕಂತೆ ಗುಣಮಟ್ಟದ ರಂಗಚಟುವಟಿಗಳು‌ ನಡೆಯಬೇಕು. ನಾಟಕದಲ್ಲಿರುವ ಪರಿಣಾಮಕಾರಿ ಸಂದೇಶಗಳಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಹಿರಿಯ ರಂಗನಟ ರತ್ನಾಕರ್‌ ಕಲ್ಯಾಣಿ ಅವರಿಗೆ ರಂಗಸಾಧಕ ಗೌರವ ನೀಡಿ ಸನ್ಮಾನಿಸಲಾಯಿತು.
ನಗರಸಭಾ ಸದಸ್ಯ ಸುಂದರ್‌ ಜೆ. ಜತ್ತನ್‌, ಕೊಡವೂರು ಸಿ.ಎ.ಬ್ಯಾಂಕಿನ ಮಹಾ ಪ್ರಬಂಧಕ ಸುಧಾಕರ್‌ ಜತ್ತನ್‌, ಉದ್ಯಮಿಗಳಾದ ಹರೀಶ್‌ ಅಮೀನ್‌, ಗಣೇಶ್‌ ಸುವರ್ಣ, ಸುರೇಶ್‌ ಕೆ. ಬೈಲಕೆರೆ, ಕಂಬ್ಳಕಟ್ಟ ಯುವ ಬಂಟರ ಸಂಘದ ಅಧ್ಯಕ್ಷ ಶಿವಪ್ರಸಾದ್‌ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸುಮನಸಾದ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ಉಪಾಧ್ಯಕ್ಷ ವಿನಯ್‌ ಕುಮಾರ್‌ ಕಲ್ಮಾಡಿ ಉಪಸ್ಥಿತರಿದ್ದರು. ಗಣೇಶ್‌ ಕಾರ್ಯಕ್ರಮ ನಿರೂಪಿಸಿದರು. ಹರೀಶ್‌ ಪಾಲನ್‌ ವಂದಿಸಿದರು.