ಮೋದಿ ಸರ್ಕಾರದಿಂದ ದೀಪಾವಳಿಗೆ ಗ್ಯಾಸ್ ಬೆಲೆ ಏರಿಕೆಯ ಗಿಫ್ಟ್: ರಮೇಶ್ ಕಾಂಚನ್ ಟೀಕೆ

ಉಡುಪಿ: ಸತತವಾಗಿ ತೈಲ‌ ದರ ಏರಿಕೆ ಮಾಡುತ್ತಿರುವುದರ ಜತೆಗೆ ಅಡುಗೆ ಅನಿಲ ದರವನ್ನೂ ಹೆಚ್ಚಿಸುವ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆಯ ಗಿಫ್ಟ್ ಕೊಟ್ಟಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಟೀಕಿಸಿದ್ದಾರೆ.

ಕೊರೊನಾ ಸಂಕಷ್ಟದಿಂದ ಸರಿಯಾಗಿ ಚೇತರಿಸಿಕೊಳ್ಳದ ಜನರಿಗೆ, ಕಳೆದ ಒಂದು ವರ್ಷದಿಂದ ಸತತವಾಗಿ ತೈಲ ಹಾಗೂ ಅಡುಗೆ ಅನಿಲ‌ ದರವನ್ನು ಹೆಚ್ಚಿಸುವ ಮೂಲಕ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರ ಬದುಕು ತತ್ತರಿಸಿದೆ. ಅಡುಗೆ ಅನಿಲ‌ ಕೊಂಡುಕೊಳ್ಳಲು ಆಗದೆ ಸೌದೆಯ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದ್ದಾರೆ.

ವಾಣಿಜ್ಯ ಅನಿಲ ದರ 2 ಸಾವಿರ ರೂಪಾಯಿ ಗಡಿ ದಾಟಿದ್ದು, ಹೋಟೆಲ್ ಉದ್ಯಮ ಬಹಳಷ್ಟು ಸಂಕಷ್ಟಕ್ಕೊಳಗಾಗಿದೆ. ಲಾಕ್ ಡೌನ್ ನಿಂದಾಗಿ ಎರಡು ವರ್ಷಗಳಿಂದ ನಷ್ಟದಲ್ಲಿದ್ದ ಹೋಟೆಲ್ ಉದ್ಯಮಿಗಳು ಇದೀಗ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿ‌ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ತಿಂಡಿ ತಿನಿಸುಗಳ ಬೆಲೆಯೂ ಮತ್ತಷ್ಟು ಹೆಚ್ಚಳವಾಗಿದೆ. ಒಳ್ಳೆಯ ದಿನಗಳನ್ನು ತೋರಿಸುತ್ತೇವೆಂದು ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ, ಜನಸಾಮಾನ್ಯರನ್ನು ಬೆಲೆ ಏರಿಕೆಯ ಸಂಕಷ್ಟಕ್ಕೆ ದೂಡಿರುವುದು ಮಾತ್ರ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೂಡಲೇ ಬೆಲೆ ಏರಿಕೆಯನ್ನು ನಿಯಂತ್ರಿಸುವ ಮೂಲಕ ಜನಸಾಮಾನ್ಯರ ಹೊರೆ ಇಳಿಸಬೇಕು. ತೈಲ ಹಾಗೂ ಗ್ಯಾಸ್ ಮೇಲಿನ ತೆರಿಗೆ ಕಡಿತಗೊಳಿಸಿ ಅಡುಗೆ ಅನಿಲ ದರವನ್ನು‌ ಇಳಿಸಬೇಕು ಎಂದು ಕಾಂಚನ್ ಆಗ್ರಹಿಸಿದ್ದಾರೆ.