ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತೀಯ ಚಿತ್ರರಂಗದ ಮಹತ್ವಾಕಾಂಕ್ಷೆಯ ಸಿನಿಮಾ ‘ರಾಮಾಯಣ’ ಅದ್ಧೂರಿಯಾಗಿ ತೆರೆಕಂಡಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಕಾಂಬಿನೇಷನ್ನ ಈ ಪೌರಾಣಿಕ ಮಹಾಕಾವ್ಯ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಮೂಡಿಸಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಭು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ. ಇನ್ನು ಲಂಕಾಧಿಪತಿ ರಾವಣನ ಖಡಕ್ ಪಾತ್ರದಲ್ಲಿ ನಟ ಯಶ್ ಮಿಂಚಿದ್ದಾರೆ. ಅವರ ವಿಭಿನ್ನ ಗೆಟಪ್, ಅಭಿನಯ ಹಾಗೂ ಅದ್ಭುತ ಸ್ಕ್ರೀನ್ ಪ್ರೆಸೆನ್ಸ್ ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಮೂಡಿಸಿದೆ.

ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್ನಲ್ಲಿ ನಿರ್ಮಾಣವಾಗಿರುವ ‘ರಾಮಾಯಣ’ ವಿಶ್ವದಾದ್ಯಂತ 50 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಿದೆ ಎನ್ನಲಾಗಿದೆ. ಭಾರತವೊಂದರಲ್ಲೇ ಸುಮಾರು 9 ಸಾವಿರ ಸ್ಕ್ರೀನ್ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.
ವಿಶೇಷವೆಂದರೆ, ಸಿನಿಮಾ ಬಿಡುಗಡೆಯಾಗುವ ಮುನ್ನವೇ ಮುಂಗಡ ಟಿಕೆಟ್ ಬುಕಿಂಗ್ ಮೂಲಕ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಭಾರತೀಯ ಪೌರಾಣಿಕ ಕಥೆಯನ್ನು ಅದ್ಧೂರಿ ದೃಶ್ಯ ವೈಭವದೊಂದಿಗೆ ತೆರೆಗೆ ತಂದಿರುವ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಯಾವ ರೀತಿಯ ದಾಖಲೆ ನಿರ್ಮಿಸಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮನೆಮಾಡಿದೆ.















