ಇವರ ಕೃಷಿ ಸಾಧನೆ ನೋಡಿದ್ರೆ ಹುಬ್ಬೇರಿಸ್ತೀರಿ,ಸಮೃದ್ಧ ಬೆಳೆ ಬೆಳೆದು ಭರ್ಜರಿ ಆದಾಯ ಗಳಿಸಿದ ರಾಮಕೃಷ್ಣ ತೆಂಡೂಲ್ಕರ್ ಕತೆ ಇದು !

ಕೃಷಿಯಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಯಶಸ್ಸು ಕಂಡ ಈ ಕೃಷಿಕನ ಸಾಹಸವನ್ನು ಕೇಳುತ್ತಿದ್ದರೆ ಕೃಷಿ ಮಾಡಬೇಕು ಎನ್ನುವವರಿಗೆ  ಒಂದು ಸ್ಪೂರ್ತಿಯಾಗುತ್ತದೆ.

ಇವರ ಹೆಸರು ರಾಮಕೃಷ್ಣ ತೆಂಡೂಲ್ಕರ್, ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಪ್ರಗತಿ ಪರ ಕೃಷಿಕ. ತಮ್ಮ ತೋಟದಲ್ಲಿ ಅಡಿಕೆ ತೆಂಗು, ಬಾಳೆ ಕೃಷಿ ಜೊತೆಗೆ ಹೈನುಗಾರಿಕೆ, ಹಲಸು, ಕೊಕ್ಕೊ, ಗೇರು,ಜೇನು ಅನಾನಸು ಕೃಷಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡು ಯಶಸ್ವಿಯಾದವರು ರಾಮಕೃಷ್ಣರು. ಸುಮಾರು 38 ವರ್ಷಗಳಿಂದ ಕೃಷಿ ಕ್ಷೇತ್ರದಲ್ಲೇ ತೊಡಗಿಸಿಕೊಂಡ ಇವರು ಅದರಲ್ಲೇ ಬೇಕಾದಷ್ಟು ಆದಾಯವನ್ನೂ ಗಳಿಸಿದ್ದಾರೆ.

ತೋಟಗಾರಿಕೆಗೂ ಸೈ:ಹೈನುಗಾರಿಕೆಗೂ ಜೈ:

ರಾಮಕೃಷ್ಣ ತೆಂಡೂಲ್ಕರ್ ಅವರು ತೋಟಕಾರಿಕೆಯ ಜೊತೆ ತರಕಾರಿಗಳಾದ ಸೋರೆಕಾಯಿ, ಬಸಳೆ, ಅಲಸಂಡೆ, ಅರಿವೆ ಸೊಪ್ಪು, ಬೆಂಡೆ, ಹೀರೆಕಾಯಿ, ಬದನೆ ಮೊದಲಾದವುಗಳು ಅಪರ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಜತೆಗೆ ಹೈನುಗಾರಿಕೆಯನ್ನೂ ನೆಚ್ಚಿಕೊಂಡಿದ್ದು, ಪ್ರತಿನಿತ್ಯ  40 ಲೀ. ಹಾಲನ್ನು ಡೈರಿಗೆ ನೀಡುತ್ತಿದ್ದಾರೆ. ತಮ್ಮ ದನಗಳ ಸಾಕಣಿಕೆಯಿಂದ ಭೂ ಸಮೃದ್ದಿ ಯೋಜನೆಯನ್ನು ಅಳವಡಿಸಿ ಸ್ಲರಿಹೊಂಡಗಳ ಮೂಲಕ ದನದ ಹಟ್ಟಿ ತೊಳೆದ ನೀರನ್ನು ನೇರವಾಗಿ ಅಡಿಕೆ ತೋಟಕ್ಕೆ ಬಳಸುತ್ತಿದ್ದಾರೆ.

ಹಲಸಿನಲ್ಲೂ ಸೊಗಸಾದ ಆದಾಯ:

ಕರಾವಳಿ ಭಾಗದಲ್ಲಿ ಹಲಸು ಕೃಷಿ ಯಥೇಚ್ಚವಾಗಿ ಬೆಳೆಯುತ್ತದೆ. ಹಲಸಿನಿ ಋತುವಿನಲ್ಲಿ ಇವರು ಬೆಳೆಯುವ ಆಧುನಿಕ ತಳಿಗಳಿಗೆ ಒಳ್ಳೆಯ ಬೇಡಿಕೆ ಇದೆ. ಉತ್ತಮ ಮಾರುಕಟ್ಟೆಯನ್ನೂ ಪಡೆದಿದ್ದಾರೆ.  ಹಲಸಿನಿ ವಿವಿಧ ಖಾದ್ಯ ಗಳಿಗೆ ಅಪಾರ ಬೇಡಿಕೆಯಿದ್ದು ಒಂದು ಮರದಲ್ಲಿ ಸರಾಸರಿಯಾಗಿ ಮುನ್ನುರೈವತ್ತಕ್ಕು ಹೆಚ್ಚು ಹಲಸು ಬೆಳೆಯುತ್ತದೆ. ಮಾರ್ಚ್ ತಿಂಗಳಿನಿಂದ ಅಗಸ್ಟ್ ತಿಂಗಳ ಕೊನೆವರೆಗೆ ಹಲಸು ಕೃಷಿ ಉತ್ತಮ ಎನ್ನುತ್ತಾರೆ ರಾಮಕೃಷ್ಣರು.

ಎಷ್ಟೆಷ್ಟು ಇಳುವರಿ:

ವಾರ್ಷಿಕ ವಾಗಿ ಮುವತ್ತೆಂಟು ಕ್ವಿಂಟಾಲ್ ಅಡಿಕೆ ಪಡೆಯುತ್ತಿದ್ದಾರೆ. ತೆಂಗು ಸರಿಸುಮಾರು ನೂರಕ್ಕೂ ಹೆಚ್ಚು ಮರಗಳಿದ್ದು ಮೂರುಸಾವಿರ ತೆಂಗಿನ ಕಾಯಿಗಳು ಸಿಗುತ್ತವೆ. ಕರಿಮೆಣಸು ಕೃಷಿಯಲ್ಲಿ ಒಂದುವರೆ ಕ್ವಿಂಟಾಲ್, ಹದಿನೈದು ಕ್ವಿಂಟಾಲ್ ಕೊಕ್ಕೊ ಪಡೆಯುತ್ತಿದ್ದಾರೆ.

ಖಾಲಿ ಉಳಿದ ಜಾಗದಲ್ಲಿ ತೋಟಗಾರಿಕಾ ಇಲಾಖೆಯಿಂದ ನೂರೈವತ್ತು ಹೊಸ ಕಸಿ ಗೇರು ಗಿಡಗಳನ್ನು ನೆಟ್ಟಿದ್ದು ಅಧಿಕ ಇಳುವರಿಯನ್ನು ನಿರೀಕ್ಷಿಸುತ್ತಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಇಳುವರಿ ನೀಡುವ ಗೇರು ಮರಗಳಿದ್ದು ಅವುಗಳಲ್ಲಿ ಎರಡು ಕ್ವಿಂಟಾಲ್ ಅದಾಯ ಗಳಿಸುತಿದ್ದಾರೆ ರಾಮಕೃಷ್ಣರು.

ಕೃಷಿ ಮಾಡೋಕೆ ತಾಳ್ಮೆ ಬೇಕು:

ಕೃಷಿ ಲಾಭದಾಯಕವಲ್ಲ ಎಂದು ದೂರ ಹೋಗುತ್ತಿದ್ದ ಜನರಿಗೆ ಇವರ ಶ್ರಮ ಮಾದರಿಯಾಗಿದೆ. ಇವರ ಅನುಭವದ ಪ್ರಕಾರ ಸ್ವಲ್ಪ ಶ್ರಮ ಮತ್ತು ತುಸು ಜಾಣ್ಮೆ ಇದ್ದರೆ ತೋಟಗಾರಿಕೆ, ಕೃಷಿ ಕ್ಷೇತ್ರ ಕಷ್ಟಕರವಲ್ಲ, ಲಾಭದಾಯಕವಾಗಿ ಮಾಡುವುದು ನಮ್ಮ ಕೈಲಿದೆ. ಎನ್ನುವುದು ಇವರ ಅಭಿಮತ. ಅದಕ್ಕೆ ಇವರ ದಶಕದ ಅನುಭವವೇ ಸಾಕ್ಷಿ.

♦ರಾಮ್ ಅಜೆಕಾರ್