ಸಂಧಾನ ಎರಡೂ ಸಮುದಾಯಕ್ಕೆ ಸಮ್ಮತವಾಗಿರಲಿ, ರಾಮಮಂದಿರ ನಿರ್ಮಾಣ ವಿಳಂಬವಾಗದಿರಲಿ: ಪೇಜಾವರ ಶ್ರೀ

ಉಡುಪಿ: ಹಿಂದೂ ಹಾಗೂ ಮುಸಲ್ಮಾನರಿಗೆ ಅಸಮಾಧಾನ ಆಗದಂತೆ ರಾಮಮಂದಿರ ವಿವಾದ ಸಂಧಾನವಾಗಬೇಕು. ಸಂಧಾನದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಳ್ಳಬೇಕು. ರಾಮಮಂದಿರ ನಿರ್ಮಾಣ ವಿಳಂಬವಾಗಬಾರದು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ರಾಮಮಂದಿರಕ್ಕೂ ಯಾವುದೇ ಸಂಬಂಧವಿಲ್ಲ. ಸಂಧಾನ ಎರಡೂ ಸಮುದಾಯಕ್ಕೆ ಸಮ್ಮತವಾಗಿರಬೇಕು. ಆದರೆ ಇಬ್ಬರಿಗೂ ಸಮ್ಮತವಾಗುವ ಸಂಧಾನ ಆಗುವ ಬಗ್ಗೆ ಸಂಶಯವಿದೆ. ಸಂಧಾನ ಆಗದಿದ್ದರೆ ನ್ಯಾಯದ ರೀತಿಯಲ್ಲಿ ಮಂದಿರ ನಿರ್ಮಾಣ ಆಗಲಿ ಎಂದರು.
ರಾಮಮಂದಿರ ವಿವಾದ ಬಗೆಹರಿಸುವ ವಿಚಾರದಲ್ಲಿ ರವಿಶಂಕರ್ ಗುರೂಜಿ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲವಿದೆ. ಅವರನ್ನು ಅಧಿಕೃತವಾಗಿ ಸುಪ್ರೀಂ ಕೋರ್ಟ್ ಸಂಧಾನಕಾರನನ್ನಾಗಿ ನೇಮಿಸಿದೆ. ಅವರಿಗೆ ಈಗ ಹೆಚ್ಚು ಬೆಲೆ ಬಂದಿದೆ ಎಂದ ಹೇಳಿದರು.
ದೇವರು ಇದ್ದಾನೋ ಇಲ್ಲವೋ ವಿಚಾರದಲ್ಲಿ ಸಂಧಾನ ಅನಗತ್ಯ. ರಾಮಮಂದಿರ ಅಯೋಧ್ಯೆಯಲ್ಲಿ ಇದ್ದದ್ದು ದೇವರಿದ್ದಷ್ಟೇ ನಿಶ್ಚಿತ. ನಿಶ್ಚಿತವಾಗಿರುವುದರ ಬಗ್ಗೆ  ಮತ್ತೆ ಸಂಧಾನ ಯಾವುದಕ್ಕೆ ಎಂದು ಸ್ವಾಮೀಜಿ‌ ಪ್ರಶ್ನಿಸಿದರು.