ಉಡುಪಿ ಹುಡುಗನ ಪ್ಯಾನ್ ಇಂಡಿಯಾ ಕಮಾಲ್!! ಪಂಚ ಭಾಷೆಯಲ್ಲಿ ಬಿಡುಗಡೆಯಾಯಿತು ‘ಚಾರ್ಲಿ777’ ಟ್ರೈಲರ್!! ಎರಡೇ ಗಂಟೆಗಳಲ್ಲಿ ಟ್ರೈಲರ್ ವೈರಲ್

ಉಡುಪಿ: ಅವಿಭಜಿತ ದ.ಕ ಜಿಲ್ಲೆಯವರಿಗೆ ಪಕ್ಕದ ಮನೆಯ ಹುಡುಗನಂತಿರುವ ರಕ್ಷಿತ್ ಶೆಟ್ಟಿ ಅಭಿನಯಿಸಿರುವ, ಕೆ. ಕಿರಣ್ ರಾಜ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಚಾರ್ಲಿ777’ ಟ್ರೈಲರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಪಂಚ ಭಾಷೆಯಲ್ಲಿ ಏಕಕಾಲಕ್ಕೆ ಚಾರ್ಲಿ777 ಟ್ರೇಲರ್ ಬಿಡುಗಡೆಯಾಗಿದ್ದು, ‘ಕೆ.ಜಿ.ಎಫ್ 2’ ಬಳಿಕದ ಪ್ಯಾನ್ ಇಂಡಿಯಾ ಚಲನ ಚಿತ್ರ ಇದಾಗಲಿದೆ.

ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಎಂಬ ಒಂದು ನಾಯಿಯ ಸುತ್ತ ಗಿರಕಿ ಹೊಡೆಯುವ ಕಥಾ ಹಂದರ ಹೊಂದಿರುವ ಈ ಚಿತ್ರವು ಸಿನಿ ಪ್ರಿಯರಲ್ಲಿ ಬಹಳಷ್ಟು ಕುತೂಹಲ ಕೆರಳಿಸಿದೆ. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ಮತ್ತು ರಾಜ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು ಜೂನ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಮಿಳು ಟ್ರೇಲರ್ ಅನ್ನು ಹೆಸರಾಂತ ನಟ ಧನುಷ್ ಬಿಡುಗಡೆ ಮಾಡಿದ್ದರೆ, ಮಲಯಾಳಂ ಆವೃತ್ತಿಯನ್ನು ನೋಬಿನ್ ಪಾಲ್, ಟೊವಿನೋ ಥಾಮಸ್ ಮತ್ತು ಆಂಟೋನಿ ವರ್ಗೀಸ್ ಹಾಗೂ ತೆಲುಗು ಆವೃತ್ತಿಯನ್ನು ರಾಣಾ ದಗ್ಗುಬಾಟಿ, ಸಾಯಿ ಪಲ್ಲವಿ ಮತ್ತು ಲಕ್ಷ್ಮಿ ಮಂಚು ಬಿಡುಗಡೆ ಮಾಡಿದ್ದಾರೆ.