ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಲೆವೂರು ಸಾರ್ವಜನಿಕ ಗಣೇಶೋತ್ಸವದಲ್ಲಿ ಇಂದು ಭಾಗವಹಿಸಿ ಗಣಪತಿ ದೇವರ ದರ್ಶನ ಪಡೆದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಲೆವೂರು ಇದರ ವತಿಯಿಂದ ಗುಡ್ಡೆಯಂಗಡಿ ಜಂಕ್ಷನ್ ನಲ್ಲಿ ಕಳೆದ 37 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ರಕ್ಷಿತ್ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಆಗಮಿಸಿ ತನ್ನ ಊರಿನ ಅಲೆವೂರು ಕಟ್ಟೆ ಗಣಪತಿಯ ದರ್ಶನ ಪಡೆದರು.
ರಕ್ಷಿತ್ ಶೆಟ್ಟಿಗೆ ತಂದೆ- ತಾಯಿ, ಅಣ್ಣ ಅತ್ತಿಗೆ ಮತ್ತು ಅವರ ಮಕ್ಕಳು ಸಾಥ್ ನೀಡಿದರು. ಇದೇ ವೇಳೆ ರಕ್ಷಿತ್ ಶೆಟ್ಟಿ ಕುಟುಂಬದ ವತಿಯಿಂದ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ರಕ್ಷಿತ್ ಕುಟುಂಬ ಅಲೆವೂರು ಕಟ್ಟೆ ಗಣಪತಿಯ ಪ್ರಸಾದ ಸ್ವೀಕರಿಸಿದರು. ಲೆಟ್ಸ್ ಕಿಲ್ ಗಾಂಧಿ ಎಂಬ ಕಿರುಚಿತ್ರದ ಮೂಲಕ ರಕ್ಷಿತ್ ಬಣ್ಣದ ಬದುಕನ್ನು ಆರಂಭ ಮಾಡಿದ್ದರು. ಆ ಸಂದರ್ಭ ಅಲೆವೂರು ಕಟ್ಟೆ ಗಣಪತಿ ಗುಡಿಯಲ್ಲೇ ಮೊದಲ ಪೂಜೆ ಸಲ್ಲಿಕೆ ಮಾಡಿದ್ದರು.