ರಕ್ಷಾ ಸಂಶಯಾಸ್ಪದ ಸಾವಿನ ಪ್ರಕರಣ ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ: ಶಾಸಕ ರಘುಪತಿ ಭಟ್

ಉಡುಪಿ: ರಕ್ಷಾ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಿಒಡಿ ತನಿಖೆಗೆ ಆದೇಶಿಸಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಇಂದು ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಕ್ಷಾ ಸಾವಿನಲ್ಲಿ ಸಾಕಷ್ಟು ಗೊಂದಲವಿದೆ. ಮಿಷನ್ ಆಸ್ಪತ್ರೆಯ ವೈದ್ಯರ ಚಿಕಿತ್ಸೆಯ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ. ಹಾಗಾಗಿ ರಕ್ಷಾ ಮನೆಯವರು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದರು. ಅದರಂತೆ ಇಂದು ಗೃಹ ಸಚಿವರ ಜತೆ ನಡೆದ ವಿಡಿಯೋ ಸಂವಾದದಲ್ಲಿ ಈ ಪ್ರಕರಣವನ್ನು ಸಿಒಡಿ ತನಿಗೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ‌ ನೀಡಿದರು.
ಮೆಡಿಕಲ್ ಬೋರ್ಡ್ ರಚನೆ:
ರಕ್ಷಾ ಅವರಿಗೆ ಚಿಕಿತ್ಸೆ ನೀಡಿರುವ ನಗರದ ಮಿಷನ್ ಆಸ್ಪತ್ರೆಯ ವಿರುದ್ಧ ಆರೋಪಗಳು ಕೇಳಿಬಂದಿವೆ. ಆದರೆ ಆಸ್ಪತ್ರೆಯ ವಿರುದ್ಧ ಏಕಾಏಕಿಯಾಗಿ ಕ್ರಮ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ ತಜ್ಞ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡ ರಚನೆ ಮಾಡಲಾಗಿದೆ. ತಂಡಕ್ಕೆ ಐದು ದಿನಗಳೊಳಗೆ ತನಿಖೆ ನಡೆಸಿ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.
ಆ ತಂಡವು ಆಸ್ಪತ್ರೆಯ ನೀಡಿರುವ ಚಿಕಿತ್ಸೆ ಹಾಗೂ ರಕ್ಷಾ ಆರೋಗ್ಯದ ಬಗ್ಗೆ ತನಿಖೆ ನಡೆಸಲಿದೆ ಎಂದರು.
ಸಿಒಡಿ ಹಾಗೂ ವೈದ್ಯಕೀಯ ಬೋರ್ಡ್ ಮೂಲಕ ರಕ್ಷಾ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಯಲಿದ್ದು, ರಕ್ಷಾ ಸಾವಿಗೆ ನ್ಯಾಯ ಸಿಗಲಿದೆ ಎಂದು ಶಾಸಕರು ಹೇಳಿದರು.