ರಾಜ್ಯ ಗೃಹಮಂತ್ರಿಯ ದಬ್ಬಾಳಿಕೆ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ

ಉಡುಪಿ: ರಾಜ್ಯ ಸರ್ಕಾರದ ಗೃಹ ಮಂತ್ರಿಗಳ ದಬ್ಬಾಳಿಕೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ
ನೇತೃತ್ವದ ನಿಯೋಗ ಸೋಮವಾರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಆ ನಂತರ ಮಾತನಾಡಿದ ಮಟ್ಟಾರು ರತ್ನಾಕರ ಹೆಗ್ಡೆ, ಕಳೆದ ಕೆಲವು ತಿಂಗಳಿನಿಂದ ಸಮ್ಮಿಶ್ರ ಸರ್ಕಾರವು ಮಾಧ್ಯಮವೂ ಸೇರಿದಂತೆ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಿಜೆಪಿಯು ತನ್ನ ವಿರುದ್ಧ ನಡೆಯುತ್ತಿರುವ ಸೇಡಿನ
ಕ್ರಮಗಳ ವಿರುದ್ಧ ದೂರುಗಳನ್ನು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಬದಲಿಗೆ ರಾಜಕೀಯ ಎದುರಾಳಿಗಳ ವಿರುದ್ಧ ಪ್ರತೀಕಾರದ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಂಡಿಟ್ಟು ಕೊಲ್ಲಬೇಕೆಂದು ಹೇಳಿಕೆ ನೀಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಬಿಜೆಪಿ ದೂರು ನೀಡಿದೆ. ಅಲ್ಲದೆ, ಜೆಡಿಎಸ್‌ ಶಾಸಕ ನಾರಾಯಣ ಗೌಡ ಚಿತ್ರ ನಟರಾದ ಯಶ್‌ ಹಾಗೂ ದರ್ಶನ್‌ ಅವರಿಗೆ ನೇರವಾದ ಬೆದರಿಕೆ ಹಾಕಿದ್ದರು. ಆದರೆ ಈವರೆಗೂ ರಾಜ್ಯ ಸರ್ಕಾರ ಈ ಎರಡು ಪ್ರಕರಣ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಸರ್ಕಾರವನ್ನಾಗಲಿ, ಮಂತ್ರಿಗಳನ್ನಾಗಲಿ ಟೀಕಿಸುವುದೇ ದೊಡ್ಡ ಅಪರಾಧವಾಗಿ ಬಿಟ್ಟಿದೆ. ಟೀಕಿಸಿದ ವಿರೋಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಭಯದ ವಾತಾವರಣ ಮೂಡಿಸಲಾಗುತ್ತಿದೆ. ರಾಜ್ಯ ಸರ್ಕಾರದ ಧೋರಣೆ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಕಾರಣಕ್ಕಾಗಿ ಬಿಜೆಪಿ ಹಿತೈಷಿಗಳು ಮತ್ತು ಹಿರಿಯ ಪತ್ರಕರ್ತರನ್ನು ಕಾರಾಗೃಹಕ್ಕೆ ಕಳುಹಿಸುವ ಷಡ್ಯಂತ್ರ ನಡೆಯುತ್ತಿದೆ. ಮಹೇಶ್‌ ವಿಕ್ರಂ ಹೆಗಡೆ, ಶೃತಿ ಬೆಳ್ಳಕ್ಕಿ, ಶಾರದಾ ಡೈಮಂಡ್‌, ಹೇಮಂತ್‌ ಕುಮಾರ್‌ ಮತ್ತು ಅಜಿತ್‌ ಶೆಟ್ಟಿ ಹೇರಂಜಿ ಅವರ ಮೇಲೆ ನಿರಾಧಾರವಾದ ಪ್ರಕರಣಗಳನ್ನು ದಾಖಲಿಸಿ ಮಾನಸಿಕ ಕಿರುಕುಳ ನೀಡಲಾಗಿದೆ. ಇವರೆಲ್ಲರೂ ಬಿಜೆಪಿ ಬಗ್ಗೆ ಅಭಿಮಾನ ಹೊಂದಿದ್ದರು. ಆ ಕಾರಣಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಅವರ ವಿರುದ್ಧ ಸೇಡಿನ ಕ್ರಮ ಜರುಗಿಸಲಾಗಿದೆ ಎಂದು ದೂರಿದರು.
ಸಮ್ಮಿಶ್ರ ಸರ್ಕಾರ ವಿರೋಧಿಸುವವರ ಧ್ವನಿ ಅಡಗಿಸುವ ಇಂತಹ ಕೃತ್ಯಗಳ ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವು ತಮ್ಮ ಮೂಗಿನಡಿಯೇ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಕೂಡಾ ದಿವ್ಯ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ಈ ವಿಷಯದಲ್ಲಿ ರಾಜ್ಯಪಾಲರ ಮಧ್ಯಸ್ಥಿಕೆ ಅಗತ್ಯವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರ ಹಕ್ಕು, ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ನಿಭಾಯಿಸುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಬೇಕೆಂದು ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ಶೀಲಾ ಕೆ. ಶೆಟ್ಟಿ, ಗೀತಾಂಜಲಿ ಸುವರ್ಣ, ನಳಿನಿ ಪ್ರದೀಪ್‌
ರಾವ್‌, ಗಿರೀಶ್‌ ಅಂಚನ್‌, ಪ್ರಭಾಕರ ಪೂಜಾರಿ ಮೊದಲಾದವರು ಇದ್ದರು.