ರಾಜ್ ಬಿ ಶೆಟ್ಟಿ ನಿರ್ದೇಶನದ ಮೂರನೇ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯೆ: 18 ದಿನಗಳಲ್ಲಿ ಚಿತ್ರೀಕರಣ ಪೂರ್ಣ

ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಂತಹ ಚಿತ್ರಗಳನ್ನು ತೆರೆಗೆ ತಂದ ರಾಜ್ ಬಿ ಶೆಟ್ಟಿ ತಮ್ಮ ನಿರ್ದೇಶನದ ಮೂರನೇ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಶೂಟಿಂಗ್ ಪೂರ್ಣಗೊಂಡಿರುವ ಬಗ್ಗೆ ಅಧಿಕೃತ ಪೋಸ್ಟ್ ಅನ್ನು ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್ ಪೋಸ್ಟ್ ಮಾಡಿದೆ. ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಇದಾಗಿದೆ. ಲೈಟರ್ ಬುದ್ದ ಫಿಲ್ಮ್ಸ್ ಸಹಯೋಗ ನೀಡಿದೆ.

ಸ್ವಾತಿ ಮುತ್ತಿನ ಮಳೆ ಹನಿ ರಮ್ಯಾ ಅವರ ಪುನರಾಗಮನದ ಚಿತ್ರವಾಗಬೇಕಿದ್ದು, ಇದರಲ್ಲಿ ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಆದಾಗ್ಯೂ, ಕೊನೆಯ ಕ್ಷಣದಲ್ಲಿ ಕೆಲವು ಬದಲಾವಣೆಗಳಿಂದಾಗಿ, ರಮ್ಯಾ ಈ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದ್ದಾರೆ ಮತ್ತು ನಟಿ ಸಿರಿ ರವಿಕುಮಾರ್ ಅವರನ್ನು ಮುಖ್ಯಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

ಊಟಿ ಮತ್ತು ಮೈಸೂರು ಭಾಗಗಳಲ್ಲಿ ಚಿತ್ರೀಕರಣ ನಡೆದಿದ್ದು ಕೇವಲ18 ದಿನಗಳ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕ ರಾಜ್ ಹೇಳಿದ್ದಾರೆ. ನಾವು ಸರಳವಾದ ಸ್ಥಳಗಳನ್ನು ಆಯ್ದುಕೊಂಡಿದ್ದರಿಂದ ಕಡಿಮೆ ಸಮಯದಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ. ಅವ್ಯವಸ್ಥೆಯ ನಡುವಿನಲ್ಲೂ ನಾನು ಇಷ್ಟಪಡುವದನ್ನು ನಾನು ರಚಿಸಬಲ್ಲೆ ಎನ್ನುವುದು ಈ ಪ್ರಾಜೆಕ್ಟ್ ನ ಉತ್ತಮ ವಿಚಾರ ಎಂದು ರಾಜ್ ಹೇಳಿದ್ದಾರೆ. ಸಿರಿ ರವಿಕುಮಾರ್ ಅವರ ನಟನಾ ಕೌಶಲ್ಯಕ್ಕಾಗಿ ಅವರನ್ನು ಹೊಗಳಿದ್ದಾರೆ.

Image
ಚಿತ್ರ: ಸಿನಿಲೋಕ/ಟ್ವಿಟರ್

ಸ್ವಾತಿ ಮುತ್ತಿನ ಮಳೆ ಹನಿಯೇ ಪೋಸ್ಟ್-ಪ್ರೊಡಕ್ಷನ್‌ ಕೆಲಸ ಶುರುವಾಗಲಿದೆ. ಚಿತ್ರವು ಒಟಿಟಿಯಲ್ಲಿ ಉತ್ತಮವಾಗಿ ಓಡಲಿದೆ ಎನ್ನುವುದು ರಾಜ್ ಅವರ ನಂಬಿಕೆ. ಆದರೆ ನೇರವಾಗಿ ಡಿಜಿಟಲ್ ಬಿಡುಗಡೆಗೆ ಹೋಗಬೇಕೇ ಎನ್ನುವುದನ್ನು ನಿರ್ಮಾಣ ಸಂಸ್ಥೆ ನಿರ್ಧರಿಸಲಿದೆ ಎನ್ನಲಾಗಿದೆ.

ಚಿತ್ರದಲ್ಲಿ ಬಾಲಾಜಿ ಮನೋಹರ್, ಸೂರ್ಯ ವಸಿಷ್ಟ, ಮತ್ತು ರೇಖಾ ಕೂಡ್ಲಿಗಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಿಧುನ್ ಮುಕುಂದನ್ ಅವರ ಸಂಗೀತ ಮತ್ತು ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವಿದೆ.

ಏತನ್ಮಧ್ಯೆ, ರಾಜ್ ಬಿ ಶೆಟ್ಟಿ ಫೆಬ್ರವರಿಯಲ್ಲಿ ಜಿಶೋ ಲೋನ್ ಆಂಥೋನಿ ಅವರ ಚೊಚ್ಚಲ ನಿರ್ದೇಶನದ ಮಲಯಾಳಂ ಚಿತ್ರ ರುಧಿರಂ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ರಮ್ಯಾ ತಮ್ಮ ಪುನರಾಗಮನವನ್ನು ಧನಂಜಯ್ ನಾಯಕನಾಗಿರುವ ರೋಹಿತ್ ಪದಕಿ ಅವರ ಉತ್ತರಕಾಂಡ ಚಿತ್ರದಿಂದ ಮಾಡಲಿದ್ದಾರೆ ಎಂದು ಸಿನಿಮಾ ಎಕ್ಪ್ರೆಸ್ ವರದಿ ಮಾಡಿದೆ.