ಉಡುಪಿ: ಕ್ರೆಡೈ ವತಿಯಿಂದ ಸಂಚಾರಿ ಪೊಲೀಸರಿಗೆ ರೈನ್ ಕೋಟ್ ವಿತರಣೆ

ಉಡುಪಿ, ಜೂ. 28: ಕ್ರೆಡೈ ವತಿಯಿಂದ ಸಿಎಸ್‌ಆರ್‌ ಯೋಜನೆಯಡಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರಿಗೆ ಕೊಡಮಾಡಿದ ೪೦ ರೈನ್‌ಕೋಟ್‌ಗಳ ವಿತರಣೆ ಶುಕ್ರವಾರ ಎಸ್ಪಿ ಕಚೇರಿಯಲ್ಲಿ‌ ನಡೆಯಿತು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ರೈನ್ ಕೋಟ್ ವಿತರಿಸಿ ಮಾತನಾಡಿ, ಹೆದ್ದಾರಿ ರಸ್ತೆಯಲ್ಲಿರುವ ಅನಧಿಕೃತ ಬಸ್‌ ನಿಲ್ದಾಣದಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಡಿವೈಎಸ್ಪಿ ಅವರಿಗೆ ಸೂಚನೆ ನೀಡಲಾಗಿದೆ.
ಉಡುಪಿ ಹಾಗೂ ಕುಂದಾಪುರದಲ್ಲಿ ಪ್ರಥಮವಾಗಿ ಈ ಪರಿಶೀಲನೆ ಕಾರ್ಯ ನಡೆಯಲಿದೆ.
ಅಧಿಕಾರಿಗಳು ಅಧಿಕೃತ ಸ್ಥಳ ಗುರುತಿಸಿ, ವರದಿ ನೀಡಲಿದ್ದಾರೆ. ಆ ವರದಿಯನ್ನು ಡಿಸಿ
ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ
ಎಂದರು.
ಸಂತೆಕಟ್ಟೆಯಲ್ಲಿ ನಡೆಯುವ ವಾರದ ಸಂತೆಯಿಂದಾಗಿ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ದೂರು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ
ಕೈಗೊಳ್ಳುತ್ತೇವೆ. ಸರ್ವೀಸ್‌ ರಸ್ತೆಗಳಲ್ಲಿ ಹಂಪ್ಸ್‌ ಅಳವಡಿಕೆ ಹಾಗೂ ಹೆದ್ದಾರಿಯಲ್ಲಿ ಬಸ್ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಂಡು ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಕ್ರೆಡೈ ಅಧ್ಯಕ್ಷ ಜೆರ್ರಿ ವಿನ್ಸೆಂಟ್‌ ಡಯಾಸ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಅವರಿಗೆ ಹಸ್ತಾಂತರಿಸಿ, ಕಾನೂನು ಸುವ್ಯವಸ್ಥೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸರು ಕೈಗೊಳ್ಳುತ್ತಿರುವ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೆಡೈ ಕಾರ್ಯದರ್ಶಿ ಜೋಯನ್‌ ಲೋವಿಸ್‌, ಸದಸ್ಯರಾದ ಪ್ರವೀಣ್‌, ಶಿವಪ್ರಸಾದ್‌,
ರಂಜನ್‌, ಹರೀಶ್‌ ಕಿಣಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜುನಾಥ್‌, ಸಂಚಾರಿ ಠಾಣೆಯ
ಉಪನಿರೀಕ್ಷಕ ನಾರಾಯಣ ಉಪಸ್ಥಿತರಿದ್ದರು.