ನೀರಿನ ಅಭಾವ ತಡೆಗೆ ಮಳೆ ನೀರಿನ ಮರುಬಳಕೆ ಅಗತ್ಯ: ರೆಬೆಲ್ಲೊ

ಶಿರ್ವ: ಇಂದು ಎಲ್ಲ ರಾಷ್ಟ್ರವೂ ನೀರಿನ ಅಭಾವವನ್ನು ಅನುಭವಿಸುತ್ತಿದೆ. ನೀರಿನ ಸಮೃದ್ಧಿಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ದೇಶವಾಗಿದೆ. ಆದರೆ ಅದರ ಸರಿಯಾದ ಬಳಕೆ ಮತ್ತು ಸಂರಕ್ಷಣೆ ಇಲ್ಲದೆ ನೀರಿನ ಕ್ಷಾಮವನ್ನು ನಾವಿಂದು ಎದುರಿಸಬೇಕಾಗಿದೆ ಎಂದು ಜಲತಜ್ಞೆ ರತ್ನಶ್ರೀ ಜೋಸೆಫ್ ಜಿ. ರೆಬೆಲ್ಲೊ ಹೇಳಿದರು.

ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಇಂದು ಏರ್ಪಡಿಸಿದ ನೀರಿನ ಸಂರಕ್ಷಣೆ ಮತ್ತು ಮರುಪೂರಣದ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಮಸ್ಯೆ ನಿವಾರಣೆಯಾಗಬೇಕಾದರೆ ಮಳೆ ನೀರನ್ನು ಸಮರ್ಪಕವಾಗಿ ಸಂರಕ್ಷಿಸಿ ಮರುಬಳಕೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್‍ ಮಾತನಾಡಿ, ನೀರಿನ ಬಳಕೆ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿ, ಮಿತವಾಗಿ ಬಳಸುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಜೆಸಿಂತ ಡಿಸೋಜ ಮಾತನಾಡಿದರು.‌

ಘಟಕದ ಸಂಯೋಜಕರಾದ ಯಶೋದ, ವಿಠಲ್ ನಾಯಕ್, ಪ್ರವೀಣ್ ಕುಮಾರ್, ಪ್ರೇಮನಾಥ್, ಶ್ರೀಮುರಳಿ ಉಪಸ್ಥಿತರಿದ್ದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು. ಸಹನಾ ಸ್ವಾಗತಿಸಿದರು. ದೀಪ್ತಿ ವಂದಿಸಿದರು.