ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಳೆ ಮುಂದುವರಿಕೆ ಸಾಧ್ಯತೆ

ಉಡುಪಿ/ ಮಂಗಳೂರು: ಕರ್ನಾಟಕದ 19 ಜಿಲ್ಲೆಗಳಲ್ಲಿ ಇಂದು ಕೂಡ ಮಳೆ ಬೀಳುವ ಸಾಧ್ಯತೆ ಇದೆ. ಈ ಪೈಕಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ 13 ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯನ್ನು ನಿರೀಕ್ಷಿಸಬಹುದು. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ನಿರೀಕ್ಷಿತವಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಚಳಿ ಮತ್ತು ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ತಿಳಿಸಿದೆ.

ಚಳಿಗಾಲವಾದ ಕಾರಣ ಹಲವೆಡೆ ಮುಂಜಾನೆ, ಬೆಳಗ್ಗೆ ಹೊತ್ತು ಮಂಜು ಮುಸುಕಿದ ವಾತಾವರಣ ಇರಲಿದೆ. ಮಳೆ ಬಿದ್ದ ಕೆಲವೆಡೆ ಒಟ್ಟಾರೆ ವಾತಾವರಣದ ಉಷ್ಣಾಂಶವು 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಸಾಧಾರಣದಿಂದ ಭಾರಿ ಮಳೆಯಾಗಲಿದೆ. ಬಹುತೇಕ ವ್ಯಾಪಕವಾಗಿ ಮಳೆಯಾಗಲಿದ್ದು, ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಬಹುದು ಎಂದು ಮಳೆ ಮುನ್ಸೂಚನೆ ವರದಿಯು ತಿಳಿಸಿದೆ.

19 ಜಿಲ್ಲೆಗಳ ಪೈಕಿ 3 ಜಿಲ್ಲೆಗಳಲ್ಲಿ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. 16 ಜಿಲ್ಲೆಗಳಲ್ಲಿ ಕೆಲವು ಕಡೆ ವ್ಯಾಪಕವಾಗಿ ಮಳೆಯ ವಾತಾವರಣ ಇರಲಿದೆ. ಉಳಿದಂತೆ ಒಣಹವೆಯನ್ನು ನಿರೀಕ್ಷಿಸಬಹುದು ಎಂದು ಇಲಾಖೆ ತಿಳಿಸಿದೆ.