Rain Alert: ಕರಾವಳಿ-ಮಲೆನಾಡಿಗೆ ಬಿಗ್ ಶಾಕ್ ಕರ್ನಾಟಕದ ಹವಾಮಾನದಲ್ಲಾಗಲಿದೆ ದಿಢೀರ್ ಬದಲಾವಣೆ

ರಾಜ್ಯದಲ್ಲಿ ಮಳೆ ಇಳಿಕೆ, ಪೆಸಿಫಿಕ್ ಚಂಡಮಾರುತದಿಂದ ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರದ ಮೇಲೆ ಪ್ರಭಾವ. ಕರಾವಳಿ, ಮಲೆನಾಡು, ಒಳನಾಡಿನಲ್ಲಿ ಮಳೆ ಮುನ್ಸೂಚನೆ.

ರಾಜ್ಯದಲ್ಲಿ ಮಳೆಯ ಆರ್ಭಟ ತುಸು ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪೆಸಿಫಿಕ್ ಸಾಗರದ ಜಪಾನ್‍ನ ಆಗ್ನೇಯ ಭಾಗದಲ್ಲಿ ಅತ್ಯಂತ ಪ್ರಭಲವಾದ ಚಂಡಮಾರುತವೊಂದು ರೂಪುಗೊಂಡಿದ್ದು, ಇದರ ನೇರ ಪ್ರಭಾವ ಈಗ ಭಾರತದ ಹಿಂದೂ ಮಹಾಸಾಗರ ಹಾಗೂ ಅರಬ್ಬಿ ಸಮುದ್ರದ ಮೇಲೆ ಬೀರಿದೆ. ಆಸ್ಟ್ರೇಲಿಯಾ ಕಡೆಯಿಂದ ಅರಬ್ಬಿ ಸಮುದ್ರದ ಕಡೆಗೆ ಬೀಸಬೇಕಿದ್ದ ತೇವಾಂಶಭರಿತ ಮಾರುತಗಳು ನೇರವಾಗಿ ಬಂಗಾಳಕೊಲ್ಲಿಯ ಮೂಲಕ ತೈವಾನ್ ಹಾಗೂ ಫಿಲಿಪ್ಪೀನ್ಸ್ ಕಡೆಗೆ ಸೆಳೆಲ್ಪಡುತ್ತಿವೆ. ಇದರಿಂದಾಗಿ ಮುಂಗಾರು ಮಳೆಯು ಅರಬ್ಬಿ ಸಮುದ್ರದಲ್ಲಿ ದಿನ ಕಳೆದಂತೆ ಸಂಪೂರ್ಣ ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಯಾವ ಜಿಲ್ಲೆಗಳಲ್ಲಿ ಹೇಗಿರಲಿದೆ ಮಳೆಯ ಅಬ್ಬರ? ಕರಾವಳಿ ಭಾಗ: ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಮಳೆ ಕಡಿಮೆಯಾಗಲಿದೆ. ದಕ್ಷಿಣ ಕನ್ನಡದಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ ಮುನ್ಸೂಚನೆ ಇದ್ದರೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಪ್ರಾಂತ್ಯ: ಕೊಡಗಿನಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದ್ದು, ಹಾಸನದ ಸಕಲೇಶಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಸಾಮಾನ್ಯ ಮಳೆಯಾಗಲಿದೆ. ಇಲ್ಲಿ ಆಗಸ್ಟ್ 10ರ ತನಕ ಇದೇ ವಾತಾವರಣ ಮುಂದುವರಿಯಲಿದೆ. ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಹಾವೇರಿ, ಗದಗ, ರಾಯಚೂರು, ಬಳ್ಳಾರಿ, ಯಾದಗಿರಿ, ಬೀದರ್ ಮತ್ತು ಕಲಬುರ್ಗಿಯಲ್ಲಿ ಅಲ್ಲಲ್ಲಿ ಮಳೆಯಾಗಲಿದ್ದು, ಆಗಸ್ಟ್ 9ರವರೆಗೆ ಅಲ್ಲಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಉಳಿದ ಕಡೆ ಮೋಡ ಕವಿದ ವಾತಾವರಣವಿರಲಿದೆ. ದಕ್ಷಿಣ ಒಳನಾಡು: ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಹಾಗೂ ವಿಜಯನಗರದಲ್ಲಿ ಅಲ್ಲಲ್ಲಿ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಮುಂದಿನ 10 ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ.