ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ರಾಹುಲ್ ಗಾಂಧಿ ಚಾಲನೆ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅನುಪಸ್ಥಿತಿಯಲ್ಲಿ ಇಂದು ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. ಸಂಸತ್ತಿನಲ್ಲಿ ಮರುಸೇರ್ಪಡೆಯಾದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಚರ್ಚೆಯನ್ನು ಪ್ರಾರಂಭಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಅವಿಶ್ವಾಸ ನಿರ್ಣಯಕ್ಕೆ ಮುನ್ನ ಮಂಗಳವಾರ ಬಿಜೆಪಿ ತನ್ನ ಸಂಸದೀಯ ಪಕ್ಷದ ಸಭೆಯನ್ನು ಕರೆದಿದ್ದು, ಬುಧವಾರ ಮತ್ತು ಗುರುವಾರ ಚರ್ಚೆ, ಉತ್ತರ ಮತ್ತು ಮತದಾನ ನಡೆಯಲಿದೆ.

ಅವಿಶ್ವಾಸ ನಿರ್ಣಯವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಮಾತನಾಡಲು ಪ್ರಧಾನಿಯನ್ನು ಒತ್ತಾಯಿಸುವ ಪ್ರತಿಪಕ್ಷಗಳ ವಿಧಾನವಾಗಿದ್ದು, ಇದು ಪ್ರಾಯೋಗಿಕವಾಗಿ ಅಂಗೀಕಾರಗೊಳ್ಳುವ ಸಾಧ್ಯತೆಯಿಲ್ಲ.

ಜುಲೈ 20 ರಂದು ಆರಂಭವಾದ ಅಧಿವೇಶನವು ಪ್ರತಿಪಕ್ಷಗಳ ಪ್ರತಿಭಟನೆಯಿಂದ ನಿರಂತರವಾಗಿ ಮುಂದೂಡಲ್ಪಟ್ಟಿದೆ. ಸರ್ಕಾರದ ದೀರ್ಘ ಪಟ್ಟಿಯ ಕೆಲವು ಮಸೂದೆಗಳು ಮಾತ್ರ ಅಂಗೀಕಾರಗೊಂಡಿವೆ.

ಪ್ರತಿಪಕ್ಷಗಳು ಮಣಿಪುರದ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿದ್ದು, ಇದನ್ನು ಜ್ವಲಂತ ಸಮಸ್ಯೆ ಎಂದು ಕರೆಯುತ್ತಿದೆ. ಸರ್ಕಾರ ಚರ್ಚೆಗೆ ಒಪ್ಪಿದ್ದರೂ ಈ ವಿಷಯದ ಬಗ್ಗೆ ಪ್ರಧಾನಿ ಸದನವನ್ನು ಉದ್ದೇಶಿಸಿ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಚರ್ಚೆಯಲ್ಲಿ ಐದು ಸಚಿವರು ಮಾತನಾಡಲಿದ್ದಾರೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಿರಣ್ ರಿಜಿಜು ಹಾಗೂ ಇನ್ನೂ ಐವರು ಬಿಜೆಪಿ ಸಂಸದರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.