ಉಡುಪಿ: ಕೇಂದ್ರ ಸರ್ಕಾರವು ಶಾಸಕರ ನಿಧಿಯಿಂದ ಶೇ. 5ರಷ್ಟು ಅನುದಾನ ವಿಶೇಷ ಮಕ್ಕಳಿಗೆ
ಕಡ್ಡಾಯವಾಗಿ ಮೀಸಲಿಡಬೇಕೆಂಬ ಕಾನೂನು ರೂಪಿಸಿದೆ. ಈ ನಿಟ್ಟಿನಲ್ಲಿ ವಿಶೇಷ ಮಕ್ಕಳ
ಶಾಲೆಗೆ ಗರಿಷ್ಟ ಪ್ರಮಾಣದ ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ಶಾಸಕ ಕೆ.
ರಘುಪತಿ ಭಟ್ ಹೇಳಿದರು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಹಾಗೂ ಮಣಿಪಾಲ ಅರ್ಚನಾ ಟ್ರಸ್ಟ್‌ನ
ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಕೆಎಂಸಿಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ
ಆಯೋಜಿಸಲಾದ ಮಣಿಪಾಲದ ವಿಶೇಷ ಮಕ್ಕಳ ಪುನವರ್ಸತಿ ಕೇಂದ್ರ ‘ಆಸರೆ’ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಶಮಾನೋತ್ಸವವನ್ನು ಉದ್ಘಾಟಿಸಿ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಮಾತನಾಡಿ, ಇಚ್ಛಾಶಕ್ತಿಯೊಂದಿದ್ದರೆ ಏನಾದರೂ ಸಾಧಿಸಬಹುದು ಎಂಬುವುದಕ್ಕೆ ಆಸರೆ ಸಂಸ್ಥೆ ಸ್ಪಷ್ಟ ನಿದರ್ಶನವಾಗಿದೆ. ವಿಶೇಷ ಮಕ್ಕಳ ಆರೈಕೆಯಲ್ಲಿ ಆಸರೆ ಸಂಸ್ಥೆಯ ಕಾರ್ಯ ಉತ್ತಮವಾಗಿದೆ ಎಂದರು.
ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಭಾಸ್ಕರ್ ಹಂದೆ ಮಾತನಾಡಿದರು.
ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಉದ್ಯಮಿಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ವಿಶೇಷ ಮಕ್ಕಳು, ವಿಶೇಷ ಮಕ್ಕಳ ಕ್ಷೇತ್ರದಲ್ಲಿ ಹತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸಾಧಕರು ಹಾಗೂ ಆಸರೆ ಸಂಸ್ಥೆಯ ಸಿಬ್ಬಂದಿ
ವರ್ಗದವರನ್ನು ಸನ್ಮಾನಿಸಲಾಯಿತು.
ಅರ್ಚನಾ ಟ್ರಸ್ಟ್‌ನ ಟ್ರಸ್ಟಿ ರಂಗ ಪೈ ಸ್ವಾಗತಿಸಿದರು. ಆಸರೆ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಜೈವಿಠಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪ್ರಕಾಶ್ ಚಂದ್ರ ವಂದಿಸಿದರು.