ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಕಿಣಿ ರಾಜೀನಾಮೆ ನೀಡಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಅವರು, ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಜಿಲ್ಲಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
18 ತಿಂಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸಾಧ್ಯವಾದಷ್ಟು ಮಟ್ಟಿಗೆ ಹೊಸತನವನ್ನು ನೀಡಿ ಪಾರದರ್ಶಕತೆಯಿಂದ ಜನರಿಗೆ ಅನುಕೂಲವಾಗುವರ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ನಾನು ಪಕ್ಷ ಮತ್ತು ಸಂಘದ ಶಿಸ್ತಿನ ಸಿಪಾಯಿ. ಪಕ್ಷದ ಸೂಚನೆಯಂತೆ ಅಧಿಕಾರ ಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಅವಧಿಯಲ್ಲಿ ಅಂಬಾಗಿಲು ,ಪೆರಂಪಳ್ಳಿ ,ಮಣಿಪಾಲ ಚತುಷ್ಫತ ಕಾಮಗಾರಿಗೆ ವೇಗ ನೀಡಿ ಕಾಲಮಿತಿಯಲ್ಲಿ ಕಾಮಗಾರಿ ನಡೆಸಿದ ಬಗ್ಗೆ ಖುಷಿ ಇದೆ. ಜೊತೆಗೆ ಜಮೀನು ನೀಡಿದವರಿಗೆ ನೇರ ಪರಿಹಾರ ಹಣ ನೀಡದೆ ಟಿಡಿಆರ್ ಮೂಲಕ ಪರಿಹಾರ ನೀಡುವ ಮೂಲಕ ಜಾಗ ಬಿಟ್ಟುಕೊಟ್ಟವರಿಗೆ ಹೆಚ್ಚಿನ ಲಾಭ ಆಗುವಂತೆ ಮಾಡಿದ್ದೇನೆ ಎಂದು ಹೇಳಿದ್ದಾರೆ.