ಕಣ್ತೆರೆದು ನೋಡಿ ಸರ್ಕಾರದ ಕೆಲಸ ಕಾಣುತ್ತೆ, ಹಳದಿ ಕಣ್ಣಿನಿಂದ ನೋಡಬೇಡಿ: ಸಚಿವ ಆರ್. ಅಶೋಕ್ ಟಾಂಗ್

ಉಡುಪಿ: ವಿರೋಧ ಪಕ್ಷದವರು ಕಣ್ಣುಬಿಟ್ಟು ನೋಡಿದರೆ ಸರ್ಕಾರದ ಕೆಲಸಗಳು ಗೊತ್ತಾಗುತ್ತದೆ. ಹಳದಿ ಕಣ್ಣಿನಿಂದ ನೋಡಿದರೆ ಸರ್ಕಾರದ ಅಭಿವೃದ್ಧಿ ಕೆಲಸಕಾರ್ಯ ಕಾಣುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಇಂದು ಉಡುಪಿಯಲ್ಲಿ ‘ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ’ ಎಂಬ ವಿರೋಧ ಪಕ್ಷದ ಟೀಕೆಗೆ ತಿರುಗೇಟು ನೀಡಿದರು.
ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಸನ್ಮಾನದಲ್ಲಿಯೇ ಕಾಲ ಕಳೆಯುತ್ತಿದ್ದು, ಇನ್ನೂ ಫೀಲ್ಡ್ ಗೆ ಇಳಿದಿಲ್ಲ. ಸಿದ್ದರಾಮಯ್ಯ ಕೋವಿಡ್ ನಿಂದಾಗಿ ಆಸ್ಪತ್ರೆಯಲ್ಲಿದ್ದಾರೆ. ಹಾಗಾಗಿ ವಿರೋಧ ಪಕ್ಷ ಇದೆಯೋ ಇಲ್ಲವೋ ಎನ್ನುವುದು ಅವರಿಗೆ ಖಾತ್ರಿಇಲ್ಲ ಎಂದು ಟಾಂಗ್ ನೀಡಿದರು.

ಡಿಕೆಶಿಗೆ ಬಿಜೆಪಿಕ್ಕಿಂತ ಸಿದ್ದರಾಮಯ್ಯನವರ ಕಾಟ ಜಾಸ್ತಿ
ಡಿಕೆಶಿಗೆ ಬಿಜೆಪಿಕ್ಕಿಂತ ಸಿದ್ದರಾಮಯ್ಯನವರ ಕಾಟ ಜಾಸ್ತಿಯಿದೆ. ಮೊದಲು ಅದರಿಂದ ತಪ್ಪಿಸಿಕೊಂಡು ಬರಲಿ. ಆ ಮೇಲೆ ಸರ್ಕಾರದ ವಿರುದ್ಧ ಟೀಕೆ ಮಾಡಲಿ. ಸರ್ಕಾರ ಎಲ್ಲದಕ್ಕೂ ಉತ್ತರ ಕೊಡಲು ಸಮರ್ಥವಾಗಿದೆ ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
ವಿರೋಧಪಕ್ಷದವರು ಸುಮ್ಮನೆ ಕೂತುಕೊಂಡು ಟೀಕೆ ಮಾಡುತ್ತಿದ್ದಾರೆ. ಟೀಕೆಯಿಂದ ಯಾವುದೇ ಕೆಲಸ ಆಗುವುದಿಲ್ಲ. ವಿರೋಧ ಪಕ್ಷದವರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಲಹೆ ಕೊಡುವ ಬದಲು ಟೀಕೆ ಮಾಡುವುದರಲ್ಲಿಯೇ ತೊಡಗಿದ್ದಾರೆ. ಇದು ಸರಿಯಲ್ಲ ಎಂದರು.