ಕಾರ್ಕಳದಲ್ಲಿ 10 ಕೋಟಿ ವೆಚ್ಚದಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ನಿರ್ಮಾಣ: ಸಚಿವ ಆರ್ ಅಶೋಕ್

ಉಡುಪಿ: ಕಾರ್ಕಳದಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ನಿರ್ಮಾಣ ಮಾಡುವಂತೆ ಕಾರ್ಕಳ ಶಾಸಕರು ವಿನಂತಿ ಮಾಡಿದ್ದಾರೆ. ಅದಕ್ಕೆ ಕೂಡಲೇ 10 ಕೋಟಿ ರೂ. ಬಿಡುಗಡೆ ಮಾಡುತ್ತೇನೆ. ಪ್ರವಾಹ ಬಂದಂತಹ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ಉಳಿದುಕೊಳ್ಳಲು ಅನುಕೂಲವಾಗಲು ಈ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹಾಗೆ ಊಟ, ಉಪಹಾರಕ್ಕೆ ಅಡುಗೆ ಕೋಣೆ, ವೈದ್ಯಕೀಯ ಕೊಠಡಿಯನ್ನು ಒಳಗೊಂಡಿರುತ್ತದೆ. ಇದನ್ನು ಮಳೆಗಾಲದಲ್ಲಿ ನೆರೆ ಸಂತ್ರಸ್ತರಿಗಾಗಿ ಬಳಸಲಾಗುತ್ತದೆ. ಉಳಿದ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇಂದು ಪ್ರವಾಹ ನಿರ್ವಹಣೆ ಕುರಿತು ಸಭೆ ನಡೆಸಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರವಾಹದಿಂದ ಯಾವುದೇ ಸಾವುನೋವು ಸಂಭವಿಸದಂತೆ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಾಕೃತಿಕ ವಿಕೋಪ ಆಗುವಂತಹ ಮುನ್ಸೂಚನೆ ಇರುವಂತಹ ಸ್ಥಳಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮುದ್ರದ ಬದಿ ಹಾಗೂ ನದಿ ಪಾತ್ರಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಶಾಲಾ ಕಾಲೇಜುಗಳನ್ನು ಗುರುತಿಸಿ ಅಲ್ಲಿ ನೆರೆ ಸಂತ್ರಸ್ತರಿಗೆ ವೈದ್ಯಕೀಯ, ಕುಡಿಯುವ ನೀರು, ಊಟದ ವ್ಯವಸ್ಥೆ ಕಲ್ಪಿಸಬೇಕು ಎಂದರು.

ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರದ ಹಣ ಬಿಡುಗಡೆ:
ಕಳೆದ ಬಾರಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಬಾಕಿ ಇರುವ ಎರಡು, ಮೂರು, ನಾಲ್ಕನೇ ಕಂತು ಪರಿಹಾರದ ಹಣ ಬಿಡುಗಡೆಗೊಳಿಸುವ ಸಲುವಾಗಿ ವಸತಿ ಇಲಾಖೆಗೆ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಾಗಾಗಿ ಕಳೆದ ಬಾರಿ ಮನೆ ಕಳೆದುಕೊಂಡ ಸಂತ್ರಸ್ತರು ಕೂಡಲೇ ಆಯಾ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಭೇಟಿ ಮಾಡಿ ಬಾಕಿ ಇರುವ ಪರಿಹಾರ ಹಣ ಪಡೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳುವಂತೆ ವಿನಂತಿ ಮಾಡಿದರು.

ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್, ಜಿಪಂ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತದ್ದರು.