ಕುಂದಾಪುರ: ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರಿನ ಕ್ವಾಂಟಮ್ ರಿಸರ್ಚ್ ಪಾರ್ಕ್ (QuRP) ಅಡಿಯಲ್ಲಿ ಕ್ವಾಂಟಮ್ ಸೈನ್ಸ್ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (Q-SFDP 2026) ಆಯೋಜಿಸಲಾಗಿದೆ. ಡಿಸೆಂಬರ್ 2ರಿಂದ 6ರವರೆಗೆ ಕುಂದಾಪುರದಲ್ಲಿ ಐದು ದಿನಗಳ ಕಾರ್ಯಕ್ರಮ ನಡೆಯಲಿದೆ.
IISc ಬೆಂಗಳೂರಿನ QuRP ಅಡಿಯಲ್ಲಿ IMJ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಮತ್ತು MIT ಕುಂದಾಪುರ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ. IISc, RRI, IISER, IIT ಹಾಗೂ IBM Quantum ಸಂಸ್ಥೆಗಳ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾಂತ್ಯದ ಜಂಟಿ ನಿರ್ದೇಶಕರು, ಪ್ರಾಂತ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಿರ್ದೇಶನ ನೀಡಿದ್ದಾರೆ. ಪ್ರತಿ ಕಾಲೇಜಿನಿಂದ ಕರ್ತವ್ಯದ ಮೇಲೆ ಒಬ್ಬ ಅಧ್ಯಾಪಕ ಹಾಗೂ ಒಬ್ಬ ವಿದ್ಯಾರ್ಥಿಯನ್ನು ನಾಮನಿರ್ದೇಶನ ಮಾಡಬೇಕಾಗಿದೆ.
ಸರ್ಕಾರಿ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸಲು ನವೆಂಬರ್ 27 ಕೊನೆಯ ದಿನವಾಗಿದ್ದು, ಆಸಕ್ತರು imjir.org/events ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.















