ಪುತ್ತೂರು ಗ್ಯಾಂಗ್ ರೇಪ್: ಐವರು ಆರೋಪಿಗಳ‌ ಬಂಧನ

ಮಂಗಳೂರು: ಸಹಪಾಠಿ ವಿದ್ಯಾರ್ಥಿನಿಯನ್ನೇ ಗ್ಯಾಂಗ್ ರೇಪ್ ಮಾಡಿದ ಆರೋಪದಡಿ ಪುತ್ತೂರು ಖಾಸಗಿ‌ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗುರುನಂದನ್, ಪ್ರಜ್ವಲ್, ಕಿಶನ್ ಸುನಿಲ್, ಪ್ರಖ್ಯಾತ್ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಸಹಪಾಠಿಯನ್ನೇ ಕಾಡಿನಲ್ಲಿ ಅತ್ಯಾಚಾರ ಮಾಡಿದ್ದರು. ಈ ಘಟನೆ ನಡೆದು ಕೆಲವು ಸಮಯವಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ವಿದ್ಯಾರ್ಥಿಗಳು ಪ್ಲಾನ್ ಮಾಡಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದ್ದು, ಆಕೆ ಪುತ್ತೂರು ಬಸ್ ಸ್ಟ್ಯಾಂಡ್ ಬಳಿ ನಿಂತಿದ್ದಾಗ ಕಾರ್ ನಲ್ಲಿ ಬಂದ ವಿದ್ಯಾರ್ಥಿಗಳು ಕಾಡಿಗೆ ಕರೆದುಕೊಂಡು ಹೋಗಿದ್ದರು. ಪುತ್ತೂರು ಸಮೀಪದ ಕಾಡಿನಲ್ಲಿ ನಾಲ್ವರೂ ಅತ್ಯಾಚಾರ ಮಾಡಿದ್ದು, ತಂಡದಲ್ಲಿದ್ದ ಒರ್ವ ಘಟನೆಯನ್ನು ವಿಡಿಯೋ ಮಾಡಿದ್ದ ಎಂದು ತಿಳಿದು ಬಂದಿದೆ.

ವೀಡಿಯೋ ವೈರಲ್…
ಕೆಲ ಸಮಯದ ಹಿಂದೆ ನಡೆದ ಈ‌ ಘಟನೆಯಾದರೂ‌, ಕಾಲೇಜು ಚುನಾವಣಾ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳ ನಡುವೆ ಮನಸ್ತಾಪ ಮೂಡಿಬಂದ ಕಾರಣ ದ್ವೇಷದಿಂದ ಓರ್ವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಯ ಬಗ್ಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ ಸುಮೊಟೋ ಕೇಸ್ ದಾಖಲಿಸಿ ತನಿಖೆಗೆ ಸೂಚಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಐವರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದೆ. ಜತೆಗೆ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡದಂತೆ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.