ಪುತ್ತೂರು: ಗದ್ದೆಗಿಳಿದು ಕೃಷಿ ಪಾಠ ಕಲಿತ ಚಿಣ್ಣರ ದಂಡು: ಇಲ್ಲಿದೆ ಶಾಲೆಯಲ್ಲೇ ಪ್ರಾಯೋಗಿಕ‌ ಪಾಠ

ಮಂಗಳೂರು: ಕರಾವಳಿ ಭಾಗದ ಬಹುತೇಕ ಶಾಲೆಗಳಲ್ಲಿ ಪ್ರಸಕ್ತ ಕಾಲಘಟ್ಟದಲ್ಲಿ ಕೃಷಿಕರ ಗದ್ದೆಗಳಲ್ಲಿ ಭತ್ತ ಬೇಸಾಯದ ಪ್ರಾಯೋಗಿಕ ಪಾಠ ನಡೆಯುತ್ತಿದೆ. ಆದರೆ ಇದಕ್ಕೆಲ್ಲ ಭಿನ್ನವಾಗಿ ಕಡಬ ತಾಲೂಕಿನ ಹಳೆನೇರಿಂಕಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಆಟದ ಮೈದಾನದ ಒಂದು ಭಾಗವನ್ನು ಗದ್ದೆ ಬೇಸಾಯಕ್ಕೆ ಮೀಸಲಿಟ್ಟು ವಿದ್ಯಾರ್ಥಿಗಳಿಗೆ ಕೃಷಿ ಪಾಠ ನಡೆಯುತ್ತಿದೆ.

ಪಾಠಕ್ಕೂ ಸೈ:ಕೃಷಿ ಪಾಠಕ್ಕೂ ಸೈ
ತುಳುನಾಡ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿಲ್ಲ ಎಂದು  ಆಚರಣೆಗಳನ್ನು ಅನುಕರಣೆ ಮಾಡದಿರುವ ಇಂದಿನ ದಿನಗಳಲ್ಲಿ ಗದ್ದೆ ಬೇಸಾಯ, ಕೊರಳ ಪರ್ಬ, ಹೊಸಕ್ಕಿ ಊಟ ಎನ್ನುವುದು ಎಲ್ಲಾ ಹಳೆಯದಾಗುತ್ತಿದೆ. ಹಳೆನೇರೆಂಕಿ ಸರಕಾರಿ ಶಾಲೆಯಲ್ಲಿ ಇವುಗಳನೆಲ್ಲ ಮೆಲುಕು ಹಾಕುವ ಪ್ರಯೋಗಿಕ ಪ್ರಯತ್ನ ಕಳೆದ ಮೂರು ವರ್ಷದಿಂದ ನಡೆಯುತ್ತಿದೆ.


ವಿಶ್ವ ಕಂಡ ಮಹಾನ್ ಸಂತ ಉಡುಪಿಯ ವಿಶ್ವೇಶತೀರ್ಥ ಸ್ವಾಮೀಜಿ ಹುಟ್ಟೂರಲ್ಲಿರುವ ಈ ಶಾಲೆಯಲ್ಲಿ ಪಠ್ಯದೊಂದಿಗೆ ಕೃಷಿ ಪಾಠವನ್ನು ಪ್ರಾಯೋಗಿಕ ಭೋಧನೆ ಮಾಡಲಾಗುತ್ತಿದೆ. ಆ ಮೂಲಕ ಮಕ್ಕಳು ಕೃಷಿ ಪದ್ದತಿಯನ್ನು ಭವಿಷ್ಯದಲ್ಲಿ ಅಳವಡಿಸಿಕೊಳ್ಳುತ್ತಾರೆ ಎನ್ನುವ ಅಚಲ ನಂಬಿಕೆ ಈ ಶಾಲಾ ಶಿಕ್ಷಕರದ್ದು.
ಪಠ್ಯದಲ್ಲಿ ಕೃಷಿ ಪದ್ದತಿಯ ಬಗ್ಗೆ ಇರುವ  ಬೋಧನೆಯನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ. ಶಾಲೆಯ ಮೈದಾನದ ಒಂದಷ್ಟು ಜಾಗದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉಳುಮೆ, ಭತ್ತ ನಾಟಿ ಮಾಡಿ ಬೆಳೆದ ಪೈರಿನ ಕಟಾವು ಮಾಡುತ್ತಾರೆ. ಭತ್ತವನ್ನು ಬಿತ್ತಿ ಕಟಾವು ಮಾಡುವ ಮದ್ಯೆ ಗ್ರಾಮೀಣ ಭಾಗದಲ್ಲಿ ಕೆಲವೊಂದು ಸಾಂಪ್ರಾದಯಿಕ ಆಚರಣೆಗಳು ರೈತರು ಮಾಡುತ್ತಾರೆ. ಕೊರಳ ಪರ್ಬ, ಹೊಸಕ್ಕಿ ಊಟ ಇಂತಹ ಆಚರಣೆಗಳನ್ನು ವಿದ್ಯಾರ್ಥಿಗಳೊಂದಿಗೆ ಆಚರಿಸಲಾಗುತ್ತದೆ. ಆ ಮೂಲಕ ಕೃಷಿ ಪಾಠವನ್ನು ಗ್ರಾಮೀಣ ಸೊಗಡಿನಲ್ಲಿ ಬೋಧಿಸಲಾಗಿದೆ. ತರಕಾರಿಯೂ ಬೆಳೆಯಲಾಗುತ್ತಿದೆ.
ಗದ್ದೆ ಬೇಸಾಯವಲ್ಲದೆ ತರಕಾರಿ ಕೃಷಿಯೂ ಬೆಳೆಯಲಾಗುತ್ತಿದೆ. ಸ್ಥಳಿಯ ಶಿಕ್ಷಣ  ಪ್ರೇಮಿಗಳು, ಪೋಷಕರ ಸಹಯೋಗದಲ್ಲಿ ಬಿಸಿಯೂಟಕ್ಕೆ ಪೂರಕವಾದ ತರಕಾರಿ ಬೆಳೆಯಲಾಗಿದೆ. ಬೆಳೆಗಳ ಪೋಷಣೆ ಸಂಪೂರ್ಣ ಹೊಣೆ ವಿದ್ಯಾರ್ಥಿಗಳಾಗಿದೆ. 

ಉಡುಪಿ ವಿಶ್ವೇಶ ತೀರ್ಥ ಸ್ವಾಮೀಜಿ ಈ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಸ್ವಾಮೀಜಿಯವರು ಹುಟ್ಟಿದ ಮನೆಯ ಕೂಗಳತೆಯಲ್ಲಿದೆ ಈ ಶಾಲೆ. ಬಾಲ್ಯದ ದಿನಗಳಲ್ಲಿ ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ತನ್ನ ಅಕ್ಕ ಜತೆ ಬರುತ್ತಿದ್ದರು.   ಹಾಗಾಗಿ ಈ ಶಾಲೆಗೂ ಸ್ವಾಮೀಜಿಗೂ ನಂಟು ಬೆಳೆದಿದೆ. ಅಲ್ಲದೆ ಸಾಮೀಜಿಯ ಹುಟ್ಟೂರಲ್ಲಿರುವ ಸರಕಾರಿ ಶಾಲೆಯಲ್ಲಿ ಇಂತಹ ಕೃಷಿ ಪದ್ದತಿಯ ಪ್ರಾಯೋಗಿಕ ಶಿಕ್ಷಣ ನೀಡುತ್ತಿರುವುದು ಮಾದರಿಯಾಗಿದೆ. 

ಈ ವರ್ಷದ ನಾಟಿ: 
ಈ ವರ್ಷದ ಭತ್ತ ಬೇಸಾಯದ ನಾಟಿ ಕಾರ್ಯ ಕಳೆದ ಸೋಮವಾರ ನಡೆಯಿತು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮುಂಡಾಸು, ವಿದ್ಯಾರ್ಥಿನಿಯರು ಮುಟ್ಟಾಲೆ ಧರಿಸಿ ಸಾಂಪ್ರದಾಯಿಕವಾಗಿ ಗದ್ದೆಗಿಳಿದು ನಾಟಿ ಮಾಡಿದರು. ನಾಟಿ ಸಂದರ್ಭ ಹಿರಿಯರು ಹಾಡುತ್ತಿದ್ದ ಓಬೆಲೆ, ರೈತ ಗೀತೆಗಳು ವಿದ್ಯಾರ್ಥಿಗಳ ಕಂಠದಿಂದ ಮೊಳಗಿತ್ತು.