ಪುತ್ತೂರು: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಿವೃತ್ತ ಗ್ರಂಥಪಾಲಕಿಯೊಬ್ಬರ ಮೃತದೇಹ ಬಂಟ್ವಾಳ ತಾಲೂಕಿನ ಶಂಭೂರು ಸಮೀಪ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟಿನಲ್ಲಿ ಶನಿವಾರ ಪತ್ತೆಯಾಗಿದೆ.
ಮೃತರನ್ನು ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಅಜೇಯನಗರದ ‘ಕಲಾತ್ಮಿಕ ಮನೆ’ ನಿವಾಸಿ, ರಾಮ ಭಟ್ ಅವರ ಪತ್ನಿ ವಿಜಯಾ ಟಿ. (60) ಎಂದು ಗುರುತಿಸಲಾಗಿದೆ. ಅವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ವಿಜಯಾ ಅವರು ಗುರುವಾರ ಬೆಳಗ್ಗೆ ಪುತ್ತೂರು ಪಟ್ಟಣಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಆದರೆ ಬಳಿಕ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಶನಿವಾರ ಶಂಭೂರು ಅಣೆಕಟ್ಟಿನ ಬಳಿ ನೇತ್ರಾವತಿ ನದಿಯಲ್ಲಿ ಅವರ ಮೃತದೇಹ ಸಿಲುಕಿರುವುದು ಪತ್ತೆಯಾಗಿದ್ದು, ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ವಿಜಯಾ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.















