ಉಡುಪಿ: ಶ್ರೀಕೃಷ್ಣ ಮಠದ ಭಾವೀ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿಗಳ ಜತೆಗೂಡಿ ಇಂದು ಪುರಪ್ರವೇಶ ಮಾಡುವರು.
ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಸಾಂಪ್ರದಾಯಿಕ ಮೆರವಣಿಗೆ ಮೂಲಕ ಶ್ರೀಪಾದರನ್ನು ಬರಮಾಡಿಕೊಳ್ಳಲಾಗುತ್ತದೆ.
ರಾತ್ರಿ 7ಕ್ಕೆ ರಥಬೀದಿ ಅನಂದತೀರ್ಥ ಮಂಟಪದಲ್ಲಿ ಶ್ರೀಪಾದರಿಗೆ ಪೌರಸಮ್ಮಾನ ಜರಗಲಿದೆ. ಇದೇ ವೇದಿಕೆಯಲ್ಲಿ ಸಂಜೆ 4ರಿಂದ 7ರ ವರೆಗೆ ಮಾರುತಿ ಅರ್ಜುನ್ ಗಣಾಚಾರಿ ಮತ್ತು ಬಳಗದಿಂದ ಭಜನೆ, ಅಣ್ಣು ದೇವಾಡಿಗ, ಧರ್ಮಸ್ಥಳ ಮತ್ತು ಬಳಗ ನಾದಸ್ವರ ವಾದನ ನಡೆಯಲಿದೆ.
ಮಂಗಳೂರಿನಲ್ಲಿ ಪರ್ಯಾಯ ಪೌರ ಸಮ್ಮಾನ ಸಮಿತಿ-ಮಂಗಳೂರು ವತಿಯಿಂದ ರವಿವಾರ ಶರವು ದೇವಸ್ಥಾನದ ಸಮೀಪದ ಬಾಳಂಭಟ್ಟ ಹಾಲ್‌ನಲ್ಲಿ ಮಂಗಳೂರು ಪೌರ ಸಮ್ಮಾನ ನೆರವೇರಿತು.
ಸಮ್ಮಾನ ಸ್ವೀಕರಿಸಿದ ಶ್ರೀ ಸುಗುಣೇಂದ್ರ ತೀರ್ಥರು ಆಶೀರ್ವಚನ ನೀಡಿ, ನಮ್ಮೆಲ್ಲ ಸಮಸ್ಯೆ ಸವಾಲು ಸಂಕಟಗಳಿಗೆ, ಮಾನಸಿಕ ತುಮುಲಗಳಿಗೆ ಭಗವದ್ಗೀತೆಯಿಂದ ಮಾತ್ರ ಪರಿಹಾರ ಸಾಧ್ಯ. ನಾನು ನನ್ನದು ಎಂಬ ಮನಸ್ಥಿತಿಯನ್ನು ಬಿಟ್ಟು ಇದೆಲ್ಲವೂ ಶ್ರೀಕೃಷ್ಣನದ್ದು ಎಂದು ಭಾವಿಸಿದಾಗ ನಮ್ಮೆಲ್ಲ ದುಗುಡಗಳಿಗೆ ಪರಿಹಾರ ದೊರೆಯುತ್ತದೆ ಎಂದರು.
ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮ ಸಂಪ್ರದಾಯ, ಆಚರಣೆಯನ್ನು ನಿಯಮಬದ್ಧವಾಗಿ ನಡೆಸಿ ಧರ್ಮ ಪರಿಪಾಲನೆ ಮಾಡು ವುದೇ ನಿಜವಾದ ಧರ್ಮ ರಕ್ಷಣೆ. ಹಬ್ಬ ಹರಿದಿನಗಳು ಕೇವಲ ರಜೆಗೆ ಸೀಮಿತ ವಾಗದೆ ಧರ್ಮ ಜಾಗೃತಿ ಕಾರ್ಯ ನಡೆಸುವಂತಾಗಬೇಕು ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು.
ಪೌರಸಮ್ಮಾನ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್, ಶಾಸಕ ಡಾ| ವೈ.ಭರತ್ ಶೆಟ್ಟಿ, ವಿ. ಪ. ಸದಸ್ಯ ಪ್ರತಾಪ್‌ಸಿಂಹ ನಾಯಕ್ ಗೌರವ ಸಲ್ಲಿಸಿದರು.
ಉಪಮೇಯರ್ ಸುನೀತಾ, ವಿವಿಧ ಕ್ಷೇತ್ರದ ಗಣ್ಯರಾದ ಶರವು ರಾಘವೇಂದ್ರ ಶಾಸ್ತ್ರಿ, ಪ್ರಕಾಶ್ ಪಿ.ಎಸ್., ಪ್ರೇಮಾನಂದ ಶೆಟ್ಟಿ, ಎಂ. ಶಶಿಧರ ಹೆಗ್ಡೆ, ಗಣೇಶ್ ಹೊಸಬೆಟ್ಟು, ಡಾ| ಎಂ.ಪಿ. ಶ್ರೀನಾಥ್, ಗಿರಿಧರ ಭಟ್, ಹರಿಕೃಷ್ಣ ಪುನರೂರು, ಎಚ್. ರಾಘವೇಂದ್ರ, ಎಚ್.ಕೆ. ಪುರುಷೋತ್ತಮ, ನಿತಿನ್ ಕುಮಾರ್, ಅಡಿಗೆ ಬಾಲಕೃಷ್ಣ ಶೆಣೈ, ಭಾಸ್ಕರಚಂದ್ರ ಶೆಟ್ಟಿ, ಚೆನ್ನಕೇಶವ, ಉಮೇಶ್ ಕರ್ಕೇರ, ಶಿವಾನಂದ ಮೆಂಡನ್, ಪ್ರಭಾಕರ ರಾವ್ ಪೇಜಾವರ, ಸತೀಶ್ ಪ್ರಭು, ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಎಸ್. ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಪ್ರೊ| ಎಂ.ಬಿ. ಪುರಾಣಿಕ್ ಪ್ರಸ್ತಾವಿಸಿದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.