ನಟ ಪುನೀತ್ ರಾಜ್ ಕುಮಾರ್ ಆರೋಗ್ಯ ಸ್ಥಿತಿ‌ ತೀರ ಗಂಭೀರ: ವಿಕ್ರಮ್ ಆಸ್ಪತ್ರೆ ಎದುರು ಜನಸ್ತೋಮ

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರ ಕ್ಷಣದಿಂದ ಕ್ಷಣಕ್ಕೆ ಕ್ಷೀಣಿಸುತ್ತಿದೆ. ಚಿಕಿತ್ಸೆ ನೀಡುತ್ತಿರುವ ವಿಕ್ರಮ್ ಆಸ್ಪತ್ರೆ ಎದುರು ಜನಸ್ತೋಮ ಸೇರಿದೆ.

ಇಂದು ಬೆಳಿಗ್ಗೆ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್‍ಕುಮಾರ್ ಕುಸಿದು ಬಿದ್ದಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ವಿಕ್ರಮ್ ಆಸ್ಪತ್ರೆಗೆ ಕರೆತರಲಾಗಿದೆ.

ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿದೆ. ಅವರ ಆರೋಗ್ಯದ ಬಗ್ಗೆ ಒಂದು ಗಂಟೆ ಬಳಿಕ ನಿಖರ ಮಾಹಿತಿ ನೀಡಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಅವರ ಅಭಿಮಾನಿಗಳು, ಆಸ್ಪತ್ರೆ ಎದುರು ಸೇರಿದ್ದಾರೆ. ಕನ್ನಿಂಗ್ ಹ್ಯಾಮ್ ರಸ್ತೆ ಹಾಗೂ ವಿಕ್ರಮ್ ಆಸ್ಪತ್ರೆ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ.

ಆಸ್ಪತ್ರೆಗೆ ರಾಜ್ಯದ ಗಣ್ಯ ನಾಯಕರ ಭೇಟಿ: ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿರುವ ನಟ ಪುನೀತ್ ರಾಜ್​ಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಆಸ್ಪತ್ರೆಯ ಬಳಿ ರಾಜ್ಯದ ಗಣ್ಯ ನಾಯಕರು ಸೇರಿದಂತೆ ಸ್ಯಾಂಡಲ್​​ವುಡ್​​ನ ಸ್ಟಾರ್ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

ಆಸ್ಪತ್ರೆಯ ಬಳಿ ಸಿಎಂ ಬಸವರಾಜ ಬೊಮ್ಮಾಯಿ, ನಟರಾದ ಯಶ್​, ವಿಜಯ ರಾಘವೇಂದ್ರ, ರವಿ ಚಂದ್ರನ್​​, ಗಣೇಶ್​​, ನಟಿ ತಾರಾ, ಶೃತಿ, ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್, ಸಚಿವ ಬಿ.ಸಿ ಪಾಟೀಲ್ ಅವರು ಭೇಟಿ ನೀಡಿದ್ದಾರೆ.

ಆಸ್ಪತ್ರೆಯ ಬಳಿ ಬೆಂಗಳೂರು ಪೊಲೀಸ್​ ಕಮಿಷನರ್​​ ಭೇಟಿ ನೀಡಿದ್ದು, ಆಸ್ಪತ್ರೆಯ ಬಳಿ ಹೆಚ್ಚಿನ ಭದ್ರತೆ ಏರ್ಪಡಿಸಿದ್ದಾರೆ. ಆಸ್ಪತ್ರೆಯ ಬಳಿ ನೂರಾರು ಮಂದಿ ಅಭಿಮಾನಿಗಳು ಜಮಾಯಿಸಿದ್ದು, ನೆಚ್ಚಿನ ನಟ ಆಸ್ಪತ್ರೆಗೆ ದಾಖಲಾಗಿರುವ ಕಾರಣ ಹಲವು ಆಸ್ಪತ್ರೆಯ ಎದುರು ಕಣ್ಣೀರಿಟ್ಟು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.