ಪಿಎಸ್ಐ ನೇಮಕಾತಿ ಹಗರಣ: ಪ್ರಧಾನಿ ಮೋದಿಗೆ ರಕ್ತದಲ್ಲಿ ಬರೆದ ಅನಾಮಧೇಯ ಪತ್ರ ವೈರಲ್!

ಬೆಂಗಳೂರು : ಹಗರಣಗಳಿಂದ ಹತಾಶರಾಗಿರುವ ಪಿಎಸ್ಐ ಅಭ್ಯರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಎಸ್ಐ ಅಭ್ಯರ್ಥಿಗಳು ಬರೆದಿದ್ದಾರೆ ಎನ್ನಲಾಗುವ ಈ ಪತ್ರದಲ್ಲಿ ಯಾರದ್ದೇ ಹೆಸರು ಉಲ್ಲೇಖವಾಗಿಲ್ಲ.

ರಾಜ್ಯದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಸುದ್ದಿಯ ನಡುವೆ, ಪಿಎಸ್ಐ ಅಭ್ಯರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರ ಸಂಚಲನ ಮೂಡಿಸಿದೆ. ಪಿಎಸ್ ಐ ಪರೀಕ್ಷೆಯ ಅಕ್ರಮದಿಂದಾಗಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಬೇಕು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಮರು ಪರೀಕ್ಷೆ ನಡೆಸದೆ ಆಯ್ಕೆ ಮಾಡಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.

2021ರಲ್ಲಿ ನಡೆದ ಎಫ್ ಡಿಎ ಪರೀಕ್ಷೆಯಲ್ಲಿಯೂ ಅಕ್ರಮವಾಗಿದೆ ಎಂದು ಆರೋಪಿಸಿರುವ ಅಭ್ಯರ್ಥಿಗಳು ಈ ಬಗ್ಗೆ ಕೂಡಾ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌವರವಿದೆ. ಹಾಗಾಗಿ ಅವರು ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಬರೆಯಲಾಗಿದೆ.

ಮೂಲ: ಝೀ ನ್ಯೂಸ್ ಕನ್ನಡ