ರೈಲ್ವೆ ಇಲಾಖೆಯ ತಮ್ಮ ಕೆಲಸಗಳಿಗೆ ಮರಳಿದ ಕುಸ್ತಿ ಪಟುಗಳು: ನ್ಯಾಯಕ್ಕಾಗಿ ಹೋರಾಟ ಜಾರಿ

ನವದೆಹಲಿ: ದೇಶದ ಕುಸ್ತಿ ಒಕ್ಕೂಟದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಭಾರತದ ದಿಗ್ಗಜ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ರೈಲ್ವೆಯಲ್ಲಿ ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ್ದಾರೆ.

ಪ್ರತಿಭಟಿಸುವ ಕುಸ್ತಿಪಟುಗಳನ್ನು ದೆಹಲಿಯ ಜಂತರ್ ಮಂತರ್‌ನಿಂದ ಹೊರಹಾಕಿದ ಕೆಲವು ದಿನಗಳ ನಂತರ ಮೇ 31 ರಂದು ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ತಮ್ಮ ಕೆಲಸವನ್ನು ಪುನರಾರಂಭಿಸಿದರು. ಅಲ್ಲಿ ಅವರು ಏಪ್ರಿಲ್‌ನಿಂದ ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿಭಟನೆಯಿಂದ ಹಿಂದೆ ಸರಿಯುವ ವರದಿಗಳನ್ನು ನಿರಾಕರಿಸಿರುವ ಸಾಕ್ಷಿ ಮತ್ತು ಪೂನಿಯಾ, “ಇದು ನ್ಯಾಯಕ್ಕಾಗಿ ನಮ್ಮ ಹೋರಾಟ. ನಾವು ಹಿಂದೆ ಸರಿಯುವುದಿಲ್ಲ” ಎಂದಿದ್ದಾರೆ.

“ನಾವು ರೈಲ್ವೇಯಲ್ಲಿ ನಮ್ಮ ಕರ್ತವ್ಯಗಳನ್ನು ಪುನರಾರಂಭಿಸಿದ್ದೇವೆ, ಆದರೆ ನಾವು ನಮ್ಮ ಭವಿಷ್ಯದ ಕಾರ್ಯತಂತ್ರದ ಬಗ್ಗೆಯೂ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದುಕೊಟ್ಟಿರುವ ಕುಸ್ತಿಪಟುಗಳಿಗೆ ಅವರ ಸಾಧನೆಗಾಗಿ ಕೇಂದ್ರ ಸರ್ಕಾರವು ಭಾರತೀಯ ರೈಲ್ವೆಯಲ್ಲಿ ಉದ್ಯೋಗವನ್ನು ನೀಡಿದ್ದು, ಕ್ರೀಡಾಳುಗಳು ತಿಂಗಳಿಗೆ ಲಕ್ಷಾಂತರ ರೂ ವೇತನ ಪಡೆಯುತ್ತಿದ್ದಾರೆ.

65 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸುವ ಪುನಿಯಾ, 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಜಕಿಸ್ತಾನ್‌ನ ಡೌಲೆಟ್ ನಿಯಾಜ್‌ಬೆಜ್‌ಕೋವ್ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದಾರೆ. ಅವರು ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ಕೆಲಸ ಮಾಡುತ್ತಿದ್ದಾರೆ. ಪೂನಿಯಾ ಹೆಂಡತಿ ಸಂಗೀತಾ ಫೋಗಾಟ್ ಕೂಡಾ ಕುಸ್ತಿ ಪಟುವಾಗಿದ್ದು ಈಕೆ ರೈಲ್ವೆ ವಿಭಾಗದಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಬಹು ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಭಾರತೀಯ ರೈಲ್ವೆಯಲ್ಲಿ ಕ್ರೀಡಾ ಅಧಿಕಾರಿಯಾಗಿ ಉದ್ಯೋಗಿಯಾಗಿದ್ದಾರೆ. ಆಕೆಯ ಪತಿ ಸತ್ಯವ್ರತ್ ಕಡಿಯನ್ ಕೂಡ ಪ್ರತಿಭಟನೆಯ ಭಾಗವಾಗಿದ್ದಾರೆ. ಕಡಿಯನ್ ಅವರು 2014 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ ಮತ್ತು ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಹಿರಿಯ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಗೀತಾ ಮತ್ತು ಬಬಿತಾ ಅವರ ಸೋದರಸಂಬಂಧಿ ವಿನೇಶ್ ಫೋಗಟ್ ಏಷ್ಯನ್ ಗೇಮ್ಸ್ ಪದಕ ವಿಜೇತೆಯಾಗಿದ್ದು, ರೈಲ್ವೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಡಿಸೆಂಬರ್ 2018 ರಲ್ಲಿ, ಅವರು ಪ್ರತಿಭಟನೆಯ ಭಾಗವಾಗಿರುವ ಸಹ ಕುಸ್ತಿಪಟು ಸೋಮ್ವಿರ್ ರಾಥೀ ಅವರನ್ನು ವಿವಾಹವಾಗಿದ್ದರು. ಸೋಮ್ವೀರ್ ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಟಿಕೆಟ್ ಪರೀಕ್ಷಕರಾಗಿದ್ದಾರೆ.