ಉಡುಪಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಂದ ಪ್ರತಿಭಟನೆ

ಉಡುಪಿ: ಕೇಂದ್ರ ಸರ್ಕಾರವು ಲೈಂಗಿಕ ಅಲ್ಪಸಂಖ್ಯಾತರ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಮಸೂದೆ 2018 ಅನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಆಶ್ರಯ ಸಮುದಾಯ ಹಾಗೂ ಸಂಗಮ ಸಂಸ್ಥೆಯ ನೇತೃತ್ವದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. 

ಲೈಂಗಿಕ ಅಲ್ಪಸಂಖ್ಯಾತರ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಮಸೂದೆ ಹಾಗೂ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆ, ರಕ್ಷಣೆ ಹಾಗೂ ಪುನರ್‌ವಸತಿ ಬಿಲ್‌ಗಳನ್ನು ಲೈಂಗಿಕ ಅಲ್ಪಸಂಖ್ಯಾತರ ಸಲಹೆ ಪಡೆಯದೆ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈಗ ರಾಜ್ಯಸಭೆಯಲ್ಲಿ ಮಂಡಿಸುವುದು ಬಾಕಿ ಇದೆ. ಬಿಲ್‌ಗಳನ್ನು ರಾಜ್ಯಸಭೆಯಲ್ಲಿ ಮಂಡಿಸದೆ ರಾಜ್ಯಸಭೆಯ ವಿಶೇಷ ಸಮಿತಿಗೆ ವಹಿಸಬೇಕು ಎಂದು ಪತ್ರಿಭಟನಾಕಾರರು ಒತ್ತಾಯಿಸಿದರು.

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆಯನ್ನು ಲೈಂಗಿಕ ಅಲ್ಪಸಂಖ್ಯಾತರ ಸಲಹೆ ಪಡೆದು ಮತ್ತೊಮ್ಮೆ ಮಂಡಿಸಬೇಕು. ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆ, ರಕ್ಷಣೆ ಹಾಗೂ ಪುನರ್‌ವಸತಿ ಬಿಲ್ ಅನ್ನು ವಿಶೇಷ ಸಮಿತಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಆಶ್ರಯ ಸಮುದಾಯದ ಮುಖ್ಯಸ್ಥ ಸಂಜೀವ ವಂಡ್ಸೆ, ಕೇಂದ್ರ ಸರಕಾರವು ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಲೈಂಗಿಕ ಅಲ್ಪಸಂಖ್ಯಾತರ ವ್ಯಕ್ತಿಗಳ ರಕ್ಷಣೆ ಮಸೂದೆಯಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಸಂವಿಧಾನದತ್ತವಾಗಿ ಲಭಿಸಿರುವ ಹಕ್ಕುಗಳು ಬಲಹೀನವಾಗಲಿದೆ. ಅಲ್ಲದೆ ತೃತೀಯ ಲಿಂಗಿಗಳು ಶಿಕ್ಷಣ, ಉದ್ಯೋಗ ಮೀಸಲಾತಿಯಿಂದ ವಂಚಿತರಾಗುತ್ತಾರೆ ಎಂದರು. 

ಈ ಮಸೂದೆಯಲ್ಲಿ ಲಿಂಗ ಪರಿವರ್ತಿತರ ಮೇಲಿನ ಹಲ್ಲೆ, ದೌರ್ಜನ್ಯವೆಸಗಿದ ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆಗೊಳಿಸಲಾಗಿದೆ. ತೃತೀಯ ಲಿಂಗಿಗಳು ತಮ್ಮ ಇಚ್ಚೆಯಂತೆ ವಾಸಿಸದೇ, ಪೋಷಕರೊಂದಿಗೆ ವಾಸಿಸಬೇಕೆಂಬ ನಿಯಮವನ್ನು ಇದರಲ್ಲಿ ಅಳವಡಿಸಲಾಗಿದೆ. ಆದರೆ ನಾವು ಮನೆಯವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವುದರಿಂದಲೇ ಮನೆಬಿಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಹಾಗಾಗಿ ಈ ಮಸೂದೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ವಿರುದ್ಧವಾಗಿದ್ದು, ಇದನ್ನು ಕೇಂದ್ರ ಸರಕಾರ ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಕಾಜಲ್‌, ನಿಶಾ, ಸಂಧ್ಯಾ, ರೇಖಾ, ಸುದರ್ಶನ್‌, ಲಾವಣ್ಯ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಯ ಬಳಿಕ ಮಸೂದೆ ರದ್ದುಪಡಿಸಬೇಕೆಂಬುವುದು ಸೇರಿದಂತೆ ವಿವಿಧ ಬೇಡಿಕೆಯನ್ನೊಳಗೊಂಡ ಮನವಿಯನ್ನು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.