ರಾಜಸ್ಥಾನದಲ್ಲಿ ದಲಿತ ಬಾಲಕನ ಹತ್ಯೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ

ಉಡುಪಿ: ರಾಜಸ್ಥಾನದಲ್ಲಿ ದಲಿತ ಬಾಲಕನ ಹತ್ಯೆ ನಡೆದಿರುವುದನ್ನು ಖಂಡಿಸಿ ಗುರುವಾರ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಪ್ರತಿಭಟನೆ ನಡೆಯಿತು. ರಾಜಸ್ಥಾನದಲ್ಲಿ ದಲಿತ ಬಾಲಕನ ಹತ್ಯೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಜುಲೈ 25 ನೇ ತಾರೀಖಿನಂದು ಶಿಕ್ಷಕನ ಮಡಕೆಯ ನೀರನ್ನು ಮುಟ್ಟಿದ ಕಾರಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಹುಡುಗನಿಗೆ ಹೊಡೆಯುತ್ತಾರೆ. ಬಾಲಕನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ಮತ್ತು ಆ ಬಳಿಕ ಉದಯಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತದೆ. ಒಂದು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ 9 ವರ್ಷದ ಬಾಲಕ ಸಾವಿಗೀಡಾಗುತ್ತಾನೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು.

ಅಷ್ಟು ಮಾತ್ರವಲ್ಲದೆ ಬಾಲಕನ ಮನೆಯವರು ಪೊಲೀಸ್ ಠಾಣೆಗೆ ಹೋದಾಗ ಎಫ್.ಐ.ಆರ್ ದಾಖಲೆ ಮಾಡಲೂ ಸಿದ್ದರಿಲ್ಲದ ನಿರ್ಲಜ್ಜ ಸರ್ಕಾರದ ಆಡಳಿತವಿದ್ದರೆ ಅದು ರಾಜಸ್ಥಾನದ ಕಾಂಗ್ರೆಸ್ ಸರ್ಕಾರ. ದಲಿತರ ಬಗ್ಗೆ ದೊಡ್ಡ ಮಾತುಗಳನ್ನಾಡುವ ಕಾಂಗ್ರೆಸ್ ನಾಯಕರು ಈಗ ಎಲ್ಲಿದ್ದಾರೆ. ಶಾಲಾ ಬಾಲಕ ಶಿಕ್ಷಕನ ಮಡಕೆಯ ನೀರನ್ನು ಮುಟ್ಟಿದ ಕಾರಣಕ್ಕೆ ಬಾಲಕನ ಕೊಲೆಯಾಗುತ್ತದೆಯೆಂದಾದರೆ ನಾಗರಿಕ ಸಮಾಜ ಚಿಂತನೆ ಮಾಡಬೇಕಾಗಿದೆ. ಇವತ್ತು ಎಂತಹ ಸ್ಥಿತಿಯಲ್ಲಿ ನಾವಿದ್ದೆವೆ ಎನ್ನುವುದನ್ನು ಅಲೋಚನೆ ಮಾಡಬೇಕಾಗಿದೆ.

ಇದು ರಾಜಸ್ಥಾನದಲ್ಲಿ ನಡೆದ ಮೊದಲ ಘಟನೆಯೇನಲ್ಲ, ಈ ಹಿಂದೆ ಕನಯ್ಯಾ ಲಾಲ್ ಪ್ರಕರಣ ಕೂಡಾ ನಿರ್ಲಜ್ಜ ಸರ್ಕಾರದ ಆಡಳಿತಾವಧಿಯಲ್ಲಿಯೆ ನಡೆದ ಘಟನೆ. ರಾಜಸ್ಥಾನದಲ್ಲಿರುವುದು ಜನವಿರೋಧಿ ಸರ್ಕಾರ. ದಲಿತ ಬಾಲಕನಿಗೆ ಆಗಿರುವ ಅನ್ಯಾಯ ದೇಶವೆ ತಲೆ ತಗ್ಗಿಸಬೇಕಾದ ವಿಚಾರ. ಉಡುಪಿ ಬಿಜೆಪಿಯು ಬಾಲಕನಿಗೆ ಅನ್ಯಾವೆಸಗಿದ ಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡಬೇಕೆನ್ನುವ ಒಕ್ಕೊರಲ ಆಗ್ರವನ್ನು ಮಾಡುತ್ತದೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಪಕ್ಷದ ಮುಖಂಡರು ಮತ್ತು ವಿವಿಧ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.